ಬೆಂಗಳೂರು: ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ AI ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದುಂಡಾವರ್ತನೆಯನ್ನು ಖಂಡಿಸಿ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತಿಭಟನೆ ನಡೆಸಿದರು.
ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಎಐ ಶೃಂಗಸಭೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ಸಿನವರು ತಮ್ಮ ಕೆಟ್ಟ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾರೆ. ವಿದೇಶಿ ಅತಿಥಿಗಳ ಸಮ್ಮುಖದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅವಮಾನ ಮಾಡುವಂತೆ ನಡೆದುಕೊಂಡಿದ್ದು ಖಂಡನೀಯ ಎಂದರು. ಯುವ ಕಾಂಗ್ರೆಸ್ಸಿಗರು ತಮ್ಮ ವರ್ತನೆಗೆ ಬೇಷರತ್ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು
ಶಾಸಕ ಸಿ.ಕೆ. ರಾಮಮೂರ್ತಿ ಅವರು ಮಾತನಾಡಿ, ಎಐ ಶೃಂಗಸಭೆಯಲ್ಲಿ 30- 35 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಭಾರತಕ್ಕೆ ಅವಮಾನವಾಗುವ ರೀತಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಇದು ಖಂಡನೀಯ ಎಂದರು.
ಭಾರತದಲ್ಲಿ ಉತ್ತಮ ಆವಿಷ್ಕಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರಿಗೂ ಧಿಕ್ಕಾರ ಕೂಗಿದ ಯುವ ಕಾಂಗ್ರೆಸ್ಸಿಗರ ವರ್ತನೆ ಅನಪೇಕ್ಷಣೀಯ ಎಂದು ಹೇಳಿದರು. ಇವರ ವರ್ತನೆಯನ್ನು ಖಂಡಿಸಿ ಸಾರ್ವಜನಿಕರೂ ಒದೆ- ಗೂಸಾ ಕೊಟ್ಟಿದ್ದಾರೆ ಎಂದು ಗಮನ ಸೆಳೆದರು. ಇದನ್ನು ಖಂಡಿಸಿ ಕೆಪಿಸಿಸಿ ಕಚೇರಿಗೂ ಮುತ್ತಿಗೆ ಹಾಕುವುದಾಗಿ ಹೇಳಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮಾತನಾಡಿ, ಕಾಂಗ್ರೆಸ್ಸಿನವರು ಎಲ್ಲ ಕಾರ್ಯಕ್ರಮ, ಯೋಜನೆಗಳಿಗೆ ತಮ್ಮ ನಾಯಕರಾದ ನೆಹರೂ, ಇಂದಿರಾ, ರಾಜೀವ್ ಗಾಂಧಿಯವರ ಹೆಸರು ಇಟ್ಟುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ನಮ್ಮ ಪ್ರಧಾನಿ ಮೋದಿಜೀ ಅವರು ಯಾವುದೇ ಒಂದು ಯೋಜನೆಗೂ ತಮ್ಮ ಹೆಸರನ್ನು ಇಟ್ಟುಕೊಂಡಿಲ್ಲ ಎಂದು ಗಮನ ಸೆಳೆದರು.