2026-03-07 07:07:21

Renukaswamy murder case | ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್‌ ಸೇರಿ ಆರೋಪಿಗಳ ವಿರುದ್ಧ ಅಬ್ಬರಿಸಿದ ಎಸ್‌ ಪಿಪಿ | Speed News Kannada

Renukaswamy murder case | ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್‌ ಸೇರಿ ಆರೋಪಿಗಳ ವಿರುದ್ಧ ಅಬ್ಬರಿಸಿದ ಎಸ್‌ ಪಿಪಿ | Speed News Kannada

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದ ಆರೋಪಿ ನಟ ದರ್ಶನ್ ಮತ್ತು ಅವರ ತಂಡದ ಪರ ವಕೀಲರು ಸಲ್ಲಿಸಿದ್ದ ವಿವಿಧ ಅರ್ಜಿಗಳ ಮೇಲೆ ಸುದೀರ್ಘ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್, ಈ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸುವ ಅಗತ್ಯ ಇಲ್ಲ ಎಂದು ವಾದಿಸಿದರು.
ಇದೇ ನ್ಯಾಯಾಲಯದಲ್ಲಿ ಸುಮಾರು 977 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಪ್ರತಿದಿನ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಎಲ್ಲಾ ಕೇಸ್‌ಗಳನ್ನು ಬದಿಗೊತ್ತಿ ಈ ಒಂದು ಪ್ರಕರಣ ಕುರಿತು ಪ್ರತಿದಿನ ಏಕೆ ವಿಚಾರಣೆ ನಡೆಸಬೇಕು? ಈಗ ನಡೆಯುತ್ತಿರುವಂತೆ ವಾರಕ್ಕೆ ಎರಡು ದಿನ ವಿಚಾರಣೆ ನಡೆದರೆ ಸಾಕು ಎಂದು ಎಂದು ವಾದಿಸಿದರು.
ವಿನಾಕಾರಣ ತನಿಖಾಧಿಕಾರಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು, ಒಳಸಂದರ್ಶನಕ್ಕೆ ಅವಕಾಶ ನೀಡುವುದು ಹಾಗೂ ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್ ಬೇಡಿಕೆಗೆ ಅನುಮತಿ ನೀಡಬಾರದು ಎಂದೂ ಮನವಿ ಮಾಡಿಕೊಂಡರು.
ಖುದ್ದು ಹಾಜರಾತಿ ಬೇಕಿಲ್ಲ:
ವಿಡಿಯೋ ಕಾನ್ಫರೆನ್ಸ್ ಬದಲಾಗಿ ಆರೋಪಿಗಳನ್ನು ಖುದ್ದಾಗಿ ನ್ಯಾಯಾಲಯಕ್ಕೆ  ಹಾಜರುಪಡಿಸಬೇಕು ಎಂಬ ವಕೀಲರ ಬೇಡಿಕೆಗೂ ಎಸ್‌ ಪಿಪಿ ವಿರೋಧ ವ್ಯಕ್ತಪಡಿಸಿದರು. ಆರೋಪಿಗಳನ್ನು  ಕರೆತಂದಾಗ ಕೋರ್ಟ್‌ ನಲ್ಲಿ ವಿಪರೀತ ಜನಜಂಗುಳಿ ಉಂಟಾಗುತ್ತದೆ, ಇದು ಭದ್ರತಾ ದೃಷ್ಟಿಯಿಂದ ಸವಾಲಾಗುತ್ತದೆ. ಆದ್ದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಯುವುದು ಸೂಕ್ತ ಎಂದು ವಾದಿಸಿದರು.
ಕುಟುಂಬಸ್ಥರ ಜತೆ ಜೈಲಿನ ಒಳಗೆ ಸಂದರ್ಶನಕ್ಕೆ ಅವಕಾಶ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತು ಮಾತನಾಡಿದ ಪ್ರಸನ್ನ ಕುಮಾರ್‌ ಅವರು, ಆರೋಪಿಗಳು ಮೊದಲು ಜೈಲು ಅಧಿಕಾರಿಗಳಿಗೆ ಮನವಿ ಮಾಡಬೇಕು. ಬಂಧೀಖಾನೆಯ ನಿಯಮಾವಳಿಗಳ ಪ್ರಕಾರ ಅವಕಾಶ ಸಿಗದಿದ್ದರೆ ಮಾತ್ರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕು. ಪದೇ ಪದೇ ಇಂತಹ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಗೆಡವಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಚಾರಣೆಯನ್ನು 'ಇನ್ ಕ್ಯಾಮರಾ' (ರಹಸ್ಯವಾಗಿ) ನಡೆಸಬೇಕು ಎಂಬ ಬೇಡಿಕೆಯನ್ನು ಎಸ್‌ ಪಿಪಿ ನಿರಾಕರಿಸಿದರು. ಆರೋಪಿಗಳ ಪರ ವಕೀಲರು ಕೋರ್ಟ್ ಒಳಗಡೆ ಇನ್ ಕ್ಯಾಮರಾ ಕೇಳುತ್ತಾರೆ, ಹೊರಗೆ ಬಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರೆ. ಈ ಪ್ರಕರಣದಲ್ಲಿ ಮುಚ್ಚಿಡುವಂತಹುದ್ದು ಏನೂ ಇಲ್ಲ. ಇದು ಅತ್ಯಾಚಾರ ಅಥವಾ ಪೋಕ್ಸೋ ಪ್ರಕರಣ ಅಲ್ಲವಲ್ಲ ಎಂದು ಹೇಳಿದರು.
ಎಲ್ಲಾ ಅರ್ಜಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.