2026-03-07 08:12:47

Renovation of 58 Dams in the State | ರಾಜ್ಯದ 58 ಅಣೆಕಟ್ಟುಗಳ ನವೀಕರಣ ಶೀಘ್ರ ಮೇಕೆದಾಟು ಯೋಜನೆ ಜಾರಿ ಡಿಸಿಎಂ ಶಿವಕುಮಾರ್‌ | Speed News Kannada

Renovation of 58 Dams in the State | ರಾಜ್ಯದ 58 ಅಣೆಕಟ್ಟುಗಳ ನವೀಕರಣ ಶೀಘ್ರ ಮೇಕೆದಾಟು ಯೋಜನೆ ಜಾರಿ ಡಿಸಿಎಂ ಶಿವಕುಮಾರ್‌ | Speed News Kannada

ಬೆಂಗಳೂರು: ಅಣೆಕಟ್ಟುಗಳು ಕೇವಲ ಸಿಮೆಂಟ್ ಮತ್ತು ಕಾಂಕ್ರೀಟ್ ರಚನೆಗಳಲ್ವ, ಅವು ರಾಷ್ಟ್ರದ ಶಕ್ತಿಯ ಸಂಕೇತ. ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಅಣೆಕಟ್ಟುಗಳ ಸುರಕ್ಷತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 'ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಏಷ್ಯಾದಲ್ಲೇ ಮೊದಲ ವಿದ್ಯುತ್‌ ತಂದ ರಾಜ್ಯ:
ಕರ್ನಾಟಕದ ಜಲ ನಿರ್ವಹಣೆಯ ಪರಂಪರೆಯನ್ನು ನೆನಪಿಸಿಕೊಂಡ ಅವರು, 1902ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನೆ ಆರಂಭಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಇದರ ಫಲವಾಗಿ ಇಂದು ಕರ್ನಾಟಕ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿದೆ ಎಂದರು.
ದೇಶದಲ್ಲಿರುವ ಬಹುತೇಕ ಅಣೆಕಟ್ಟುಗಳು 60-70 ವರ್ಷಗಳಷ್ಟು  ಹಳೆಯವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 'ಡ್ರಿಪ್ (DRIP) ಯೋಜನೆಯಡಿ ಕರ್ನಾಟಕದ 58 ಅಣೆಕಟ್ಟುಗಳನ್ನು 1,500 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದು ತಿಳಿಸಿದರು. 
ಮೇಕೆದಾಟು ಮತ್ತಿತರ ನೀರಾವರಿ ಯೋಜನೆಗಳು:
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಸಕಾರಾತ್ಮಕ ತೀರ್ಪು ಬಂದಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ. ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಯನ್ನು ರೈತಸ್ನೇಹಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದೂ ತಿಳಿಸಿದರು.
ಅಣೆಕಟ್ಟುಗಳ ಕೆಳಭಾಗದಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಇರುವ ನಿರ್ಬಂಧವನ್ನು ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರಕ್ಕೆ ಶಿವಕುಮಾರ್‌  ಅವರು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಶ್ವಬ್ಯಾಂಕ್ ಉಪಾಧ್ಯಕ್ಷ ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಯಾದವ್, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ಜಪಾನಿನ ಐಸಿಹೆಚ್ಎಆರ್ ಎಂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ತೊಶಿಯೋ ಕೊಯ್ಕೆ, ಬೃಹತ್ ಅಣೆಕಟ್ಟು ಅಂತಾರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಿ.ಕೆ. ಶರ್ಮಾ, ಭಾರತೀಯ ವಿಜ್ಞಾನ್ ಸಂಸ್ಥೆಯ ಡೀನ್ ಪ್ರೋ. ಸತ್ಯಂ ಸುವಾಸ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.