ಬೆಂಗಳೂರು: ಜೂನ್ ತಿಂಗಳಲ್ಲಿ ತೆರವಾಗಲಿರುವ ರಾಜ್ಯಸಭೆಯ ಕರ್ನಾಟಕದ 4 ಸ್ಥಾನಗಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.
ಕರ್ನಾಟಕವನ್ನು ಪ್ರತಿನಿಧಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮುಖಂಡರಾದ ಈರಣ್ಣ ಕಡಾಡಿ, ಕೆ. ನಾರಾಯಣ ಅವರ ರಾಜ್ಯಸಭೆಯ ಪ‍್ರಸಕ್ತ ಅವಧಿ ಜೂನ್ 25 ರಂದು ಕೊನೆಗೊಳ್ಳಲಿದೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳು ಕಾಂಗ್ರೆಸ್‌ಗೆ ಅನಾಯಾಸವಾಗಿ ಸಿಗಲಿವೆ. ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ. ಮೂರೂ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಮತ್ತೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸಲು ಮಾಜಿ ಪ್ರಧಾನಿಎಚ್.ಡಿ. ದೇವೇಗೌಡ ಅವರು ಉತ್ಸುಕರಾಗಿದ್ದಾರೆ. ಆದರೆ ಜೆಡಿಎಸ್ ಗೆ ಅಗತ್ಯ ಸಂಖ್ಯಾಬಲ ಇಲ್ಲ. ಕೇವಲ 17 ಸದಸ್ಯರನ್ನು ಹೊಂದಿರುವ ಜೆಡಿಎಸ್ ಗೆ ಬಿಜೆಪಿ ಬೆಂಬಲ ನೀಡಿದರೆ ಮಾತ್ರ ಅವರ ಹಾದಿ ಸುಗಮವಾಗಲಿದೆ. ದೇವೇಗೌಡರಿಗೆ 93 ವರ್ಷವಾಗಿದ್ದು, ವಯಸ್ಸು ಅವರಿಗೆ ಅಡ್ಡಿಯಾಗಿದೆ. ರಾಜ್ಯ ಬಿಜೆಪಿಯೂ ಅವರ ಆಯ್ಕೆಯನ್ನು ವಿರೋಧಿಸುತ್ತಿದೆ.
ಬೆಂಗಳೂರಿಗೆ ಆಗಮಿಸಿರುವ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್, ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್‌ವಾಲ್, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಗುರುವಾರ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಪರ ಒಲವು ವ್ಯಕ್ತವಾಗಿದೆ. ಅವರು ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ಮತ್ತು ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಅವರ ಬದಲಾಗಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೂ ಗೌಡರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದ್ದರಿಂದ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಂಬಂಧ ಚರ್ಚೆ ನಡೆದಿದೆ.
ಈಗ ಜೆಡಿಎ ಪಕ್ಷ- ಎನ್‌ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದೆ. ಹಾಗಾಗಿ ದೇವೇಗೌಡರ ಆಯ್ಕೆಗೆ ಸಹಕರಿಸಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಅವರು ಈಗಾಗಲೇ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಹಲವು ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
3 ಸ್ಥಾನಗಳು ಕಾಂಗ್ರೆಸ್‌ಗೆ ಅನಾಯಾಸವಾಗಿ ಸಿಗಲಿದ್ದು ಇನ್ನೂ ಮಾತುಕತೆ ಆರಂಭವಾದ ಲಕ್ಷಣಗಳು ಕಾಣಿಸುತ್ತಿಲ್ಲ.