ಬೆಂಗಳೂರು: ಜೂನ್ ತಿಂಗಳಲ್ಲಿ ತೆರವಾಗಲಿರುವ ರಾಜ್ಯಸಭೆಯ ಕರ್ನಾಟಕದ 4 ಸ್ಥಾನಗಳು ಸೇರಿದಂತೆ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಜೂನ್ 18 ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿರುತ್ತದೆ. ನಾಮಪತ್ರ ಹಿಂಪಡೆಯಲು ಜೂನ್ 11 ಕಡೆಯ ದಿನ. ಜೂನ್ 18 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಕರ್ನಾಟಕವನ್ನು ಪ್ರತಿನಿಧಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮುಖಂಡರಾದ ಈರಣ್ಣ ಕಡಾಡಿ, ಕೆ. ನಾರಾಯಣ ಅವರ ರಾಜ್ಯಸಭೆಯ ಪ‍್ರಸಕ್ತ ಅವಧಿ ಜೂನ್ 25 ರಂದು ಕೊನೆಗೊಳ್ಳಲಿದೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳು ಕಾಂಗ್ರೆಸ್‌ಗೆ ಅನಾಯಾಸವಾಗಿ ಸಿಗಲಿವೆ. ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ. ಮೂರೂ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಈ 24 ರಾಜ್ಯಸಭೆ ಸದಸ್ಯರು ವಿವಿಧ ರಾಜ್ಯಗಳ ವಿಧಾನಸಭೆಗಳಿಂದ ಚುನಾಯಿತರಾಗುತ್ತಾರೆ.