ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಗೆಲುವು ಸಾಧಿಸಿ ನಗೆ ಬೀರಿದ್ದಾರೆ. ಫಲಿತಾಂಶ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೆಸರೆರಚಾಟ ಮುಂದುವರೆದಿದೆ. ಅಂಚೆ ಮತಗಳ ಮತ ಮರು ಎಣಿಕೆಯಲ್ಲಿ ಪಿತೂರಿ ನಡೆದಿದೆ ಎಂದು ಕಾಂಗ್ರೆಸ್ ಆಪಾದಿಸಿದರೆ ಕಾಂಗ್ರೆಸ್ ವೋಟ್ ಚೋರಿ ಮಾಡಿದೆ ಎಂದು ಬಿಜೆಪಿ ಆಪಾದಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಂಚೆ ಮತಗಳ ಮತ ಮರು ಎಣಿಕೆಯಲ್ಲಿ ದೊಡ್ಡ ಪಿತೂರಿ ನಡೆದಿದೆ ಎಂದು ಆಪಾದಿಸಿದ್ದಾರೆ. ಕ್ರಿಮಿನಲ್ ಕೃತ್ಯ ನಡೆದಿದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಮಾಜಿ ಶಾಸಕರಾದ ಜೀವರಾಜ್ ಅವರೊಂದಿಗೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನು ಬಳಿಸಿಕೊಂಡು ವಂಚನೆ ನಡೆಸಿದ್ದಾರೆ. ಇದು ದೇಶಕ್ಕೆ ಒಂದು ಸಾಕ್ಷಿ. ಇದರ ಬಗ್ಗೆ ವರದಿ ಬಂದಿದೆ. ಈ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ ಎಂದಿದ್ದಾರೆ.
ಕೋರ್ಟ್‍ಗೆ ಮೊರೆ ಹೋಗಿ ಕೇವಲ ಪೋಸ್ಟಲ್ ಬ್ಯಾಲೆಟ್‍ಗಳನ್ನೇ ಮರು ಎಣಿಕೆ ಮಾಡಬೇಕು ಎಂದು ಆಗ್ರಹಪಡಿಸಿದ್ದು ಏಕೆ? ಅವರದ್ದೇ ಏಜೆಂಟ್ ಸಹಿ ಮಾಡಿದ್ದನ್ನು ಮತ್ತೆ ಕೌಂಟ್ ಮಾಡಿಸಿದ್ದಾರೆ. ಇದು ಒಂದು ವ್ಯವಸ್ಥಿತ ಅಪರಾಧ ಎಂದು ಕಿಡಿಕಾರಿದ್ದಾರೆ.
ರಾತ್ರಿಯಿಂದಲೂ ನಾನು ಗಮನಿಸುತ್ತಿದ್ದೇನೆ. ನಾವು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದೂ ಹೇಳಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದು, ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು - ಸತ್ಯಕ್ಕೆ ಜಯ! ವೋಟ್ ಚೋರ್ ಕೌನ್ ಹೈ? ರಾಹುಲ್ ಗಾಂಧಿ ಹೈ! ಎಂದು ವ್ಯಂಗ್ಯವಾಡಿದ್ದಾರೆ. ಎಕ್ಸ್ ನಲ್ಲಿ ಅವರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ ನೀಡಿದ ತಕ್ಕ ಉತ್ತರ ಇದಾಗಿದೆ ಎಂದಿದ್ದಾರೆ.
2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಜನಾದೇಶವನ್ನು ಕಸಿದುಕೊಳ್ಳಲಾಗಿತ್ತು. ಅಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಮನವಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಲಾಗಿತ್ತು. ಅಧಿಕಾರ ಬಲಕ್ಕೆ ಮಣಿಯದ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠವು ನೀಡಿದ ಐತಿಹಾಸಿಕ ಆದೇಶದಂತೆ ನಿನ್ನೆ ಮರು ಎಣಿಕೆ ನಡೆಯಿತು. ಕಾಂಗ್ರೆಸ್ ಪಕ್ಷದ ಮೋಸ ಬಯಲಾಯಿತು.
ಕಳೆದ ಮೂರು ವರ್ಷಗಳಿಂದ ಅನರ್ಹವಾಗಿ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ಗೆ ಈಗ ಮುಖಭಂಗವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು. ಶೃಂಗೇರಿಯ ಮತದಾರರ ಮತದ ಮೌಲ್ಯಕ್ಕೆ ಸಂದ ಜಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಹೀಗಿತ್ತು:
2023ರ ಎಣಿಕೆ ವೇಳೆ ಮಾನ್ಯವಾಗಿದ್ದ ಮತಗಳ ಪೈಕಿ ಟಿ.ಡಿ.ರಾಜೇಗೌಡ ಅವರ 255 ಮತಗಳು ಮತ್ತು ಡಿ.ಎನ್.ಜೀವರಾಜ್ ಅವರಿಗೆ ಬಂದಿದ್ದ ಮತಗಳ ಪೈಕಿ 2 ಮತಗಳು ಅಮಾನ್ಯಗೊಂಡವು. ಇದರ ಪರಿಣಾಮ 52 ಮತಗಳ ಅಂತರದಲ್ಲಿ ಜೀವರಾಜ್ ಜಯ ಸಾಧಿಸಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.
ಈ ಸಂಬಂಧ ಮಾಹಿತಿ ನೀಡಿದ ಚುನಾವಣಾಧಿಕಾರಿ ಗೌರವಶೆಟ್ಟಿ, '023ರ ಮತ ಎಣಿಕೆ ವೇಳೆ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 692 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 569 ಮತಗಳು ಲಭಿಸಿವೆ. ಆದರೆ, ಶನಿವಾರ ನಡೆದ ಪರಿಶೀಲನೆ ಮತ್ತು ಮರು ಎಣಿಕೆಯ ಬಳಿಕ ಜೀವರಾಜ್ ಅವರ ಮತಗಳು 690 ಆಗಿದ್ದರೆ ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿದೆ' ಎಂದು ತಿಳಿಸಿದರು.
ನ್ಯಾಯಾಲಯದ ನಿರ್ದೇಶನದಂತೆ ಮರುಎಣಿಕೆ ನಡೆಸಿ ಮತಪತ್ರಗಳನ್ನು ಮತ್ತೆ ಸ್ಟ್ಯಾಂಗ್ ರೂಮಿನಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಮತ ವ್ಯತ್ಯಾಸದ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ' ಎಂದು ಹೇಳಿದರು.