ಬೆಂಗಳೂರು: ಮುಂದಿನ 15 ದಿನಗಳ ಒಳಗಾಗಿ ಒಳಚರಂಡಿ ಹೂಳೆತ್ತುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂಬರುವ ಮಳೆಗಾಲದಲ್ಲಿ ನಗರದ ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.
ಅವರು ಜಲಮಂಡಳಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮುಂಗಾರು ಪೂರ್ವಸಿದ್ಧತಾ ಸಭೆ ಈ ಮಹತ್ವದ ನಿರ್ದೇಶನಗಳನ್ನು ನೀಡಿದರು.
"ಮಳೆಗಾಲದಲ್ಲಿ ನಗರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗದಂತೆ ಹಾಗೂ ಮ್ಯಾನ್ ಹೋಲ್‌ಗಳು ಉಕ್ಕಿಹರಿಯದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಮಳೆಯಿಂದ ಹಾನಿಗೊಳಗಾಗುವ ಸೂಕ್ಷ್ಮ ಪ್ರದೇಶಗಳನ್ನು ತಕ್ಷಣವೇ ಗುರುತಿಸಿ, ಮುಂದಿನ 15 ದಿನಗಳ ಒಳಗೆ ಕಡ್ಡಾಯವಾಗಿ ಮ್ಯಾನ್‌ಹೋಲ್‌ಗಳ ಸ್ವಚ್ಛತೆ ಹಾಗೂ ಹೂಳೆತ್ತುವ ಕಾರ್ಯವನ್ನು (Desilting) ಪೂರ್ಣಗೊಳಿಸಬೇಕು," ಎಂದು ನಿರ್ದೇಶನ ನೀಡಿದರು.
ಕ್ಷೇತ್ರ ಮಟ್ಟದ ಪರಿಶೀಲನೆ ಹಾಗೂ ತಾಂತ್ರಿಕ ಎಚ್ಚರಿಕೆ ಕುರಿತು ಮಾತನಾಡಿದ ಅವರು, "ಯಾವುದೇ ಕಾರಣಕ್ಕೂ ಮಳೆನೀರು ನಮ್ಮ ಒಳಚರಂಡಿ ವ್ಯವಸ್ಥೆಯೊಳಗೆ ನುಗ್ಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ವಲಯವಾರು ಮುಖ್ಯ ಅಭಿಯಂತರರು ಕೇವಲ ಕಚೇರಿಗೆ ಸೀಮಿತವಾಗದೆ, ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಈ ಕಾರ್ಯಗಳ ಬಗ್ಗೆ ವಾಸ್ತವ ಪರಿಶೀಲನೆ ನಡೆಸಬೇಕು. ಹಾಗೆಯೇ, ತಾವು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಕೇಂದ್ರ ಕಚೇರಿಗೆ ಸಮಗ್ರ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ," ಎಂದು ಹೇಳಿದರು.
ತುರ್ತು ಸಂದರ್ಭಗಳ ನಿರ್ವಹಣೆ ಕುರಿತು ಅಧಿಕಾರಿಗಳನ್ನು ಎಚ್ಚರಿಸಿದ ಡಾ. ರಾಮ್ ಪ್ರಸಾತ್ ಮನೋಹರ್, "ಮಳೆಗಾಲದಲ್ಲಿ ಯಾವುದೇ ಪ್ರದೇಶದಲ್ಲಿ ಮ್ಯಾನ್‌ಹೋಲ್ ಕಟ್ಟಿಕೊಳ್ಳುವ ಅಥವಾ ಇನ್ನಿತರ ತೊಂದರೆಗಳು ಎದುರಾದರೆ, ತಕ್ಷಣವೇ ಸ್ಪಂದಿಸಲು ನಮ್ಮ ವ್ಯವಸ್ಥೆ ಸಿದ್ಧರಿರಬೇಕು. ಇದಕ್ಕಾಗಿ, ಪ್ರತಿಯೊಂದು ಕಾರ್ಪೊರೇಷನ್ ವ್ಯಾಪ್ತಿಗೂ ಒಂದು ಪ್ರತ್ಯೇಕ ತುರ್ತು ನಿರ್ವಹಣಾ ತಂಡವನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿಕರ ದೂರುಗಳಿಗೆ ವಿಳಂಬವಿಲ್ಲದೆ ಪರಿಹಾರ ಒದಗಿಸಬೇಕು," ಎಂದು ಸೂಚಿಸಿದರು.
ಸಭೆಯಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರರು, ಎಲ್ಲಾ ವಲಯಗಳ ಮುಖ್ಯ ಅಭಿಯಂತರರು ಸೇರಿದಂತೆ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.