ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಹಾಗೂ ಇತರ ಹುದ್ದೆಗಳಿಗೆ ಕನ್ನಡಿಗರಿಗೆ ಸೂಕ್ತ ಸ್ಥಾನ ಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಎಲ್ಲ ಭಾಷಿಕರಿಗೆ ಅವಕಾಶ ನೀಡಿರಲಿಲ್ಲ ಆದರೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಬಂದ ಮೇಲೆ ಸಾಕಷ್ಟು ಅನುಕೂಲ ಆಗಿದ್ದು, ದೇಶದ ಎಲ್ಲ ಭಾಷಿಕರಿಗೆ ಪ್ರಾಶಸ್ತ್ಯ ಕೊಡಲಾಗಿದೆ ಎಂದರು.
ರೈಲ್ವೆ ನೇಮಕಾತಿ ಮತ್ತು ಪದೋನ್ನತಿ, ವರ್ಗಾವಣೆ ಸೇರಿದಂತೆ ಎಲ್ಲ ಹಂತಗಳಲ್ಲಿ ಎಲ್ಲ ಭಾಷೆಗಳಿಗೂ ಮಾನ್ಯತೆ ಸಿಗಬೇಕು ಎಂಬ ದೃಷ್ಟಿಯಿಂದ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಎರಡು ಪ್ರಮುಖ ಭಾಷೆಗಳಾದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಹೆಚ್ಚು ಅವಕಾಶಗಳಿವೆ. ಇತರ ಮಾನ್ಯತೆ ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ ಎಂದು ಸೋಮಣ್ಣ ಹೇಳಿದರು.