2026-03-07 07:28:49

raid on fake call center 2 arrestedSpeedNews Kannada

raid on fake call center 2 arrestedSpeedNews Kannada

ಬೆಂಗಳೂರು:, ನಗರದ ಜಯನಗರದಲ್ಲಿರುವ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ರಾಜ್ಯ ಸೈಬರ್ ಕಮಾಂಡ್‌ಗೆ ಸೇರಿದ ಬೆಂಗಳೂರಿನ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗುಜರಾತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿಯ ಹಜರತ್ ನಿಜಾಮುದ್ದೀನ್ ನಿವಾಸಿ ಇಮ್ರಾನ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 31 ಮೊಬೈಲ್ ಫೋನ್‌, 13 ಲ್ಯಾಪ್‌ಟಾಪ್‌, 16 ಸಿಮ್ ಕಾರ್ಡ್‌, ಮಲ್ಟಿವೇರ್ ಬ್ಯುಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಲೆಟರ್‌ಹೆಡ್ ಹಾಗೂ ನೊಂದವರ ಹೆಸರು ಮತ್ತು ಮೊಬೈಲ್ ನಂಬರ್‌ಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಜಯನಗರದ 9ನೇ ಬ್ಲಾಕ್‌ ನಲ್ಲಿ ಮಲ್ಟಿವೇರ್ ಬ್ಯುಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ ಹೆಸರಿನ ಕಂಪನಿ‌ ಆರಂಭಿಸಿದ್ದ ಆರೋಪಿಗಳು‌, ವಿವಿಧ ರಾಜ್ಯಗಳ ಸುಮಾರು 15 ಜನರನ್ನು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ ಗಳನ್ನಾಗಿ ನೇಮಿಸಿಕೊಂಡಿದ್ದರು. ಅವರು ಸಾರ್ವಜನಿಕರಿಗೆ ಕರೆ ಮಾಡಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಸಾರ್ವಜನಿಕರಿಗೆ ಬ್ಯಾಂಕ್ ಖಾತೆಯ ವಿವರ ನೀಡಿ ಆನ್‌ ಲೈನ್ ಮೂಲಕ ಹಣ ಪಡೆದು ನಂತರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಗೊಳಗಾದವರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊಬೈಲ್‌ ನಂಬರ್‌ ನ ಲೊಕೇಷನ್‌ ಆಧರಿಸಿ ಪೊಲೀಸರು ಜಯನಗರದ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿ, ತಪಾಸಣೆ ನಡೆಸಿದಾಗ ಆರೋಪಿಗಳ ಸಂಚು ಬಯಲಾಗಿದೆ. ಈ ಸಂಬಂಧ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66(ಆರ್) ಮತ್ತು ಬಿಎನ್‌ಎಸ್‌ನ 318 (4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಗೂಗಲ್ ಮೂಲಕ ಸ್ಟಾಕ್ ಮಾರುಕಟ್ಟೆ ಗ್ರಾಹಕರ ಡೇಟಾವನ್ನು ಪಡೆದುಕೊಳ್ಳುತ್ತಿದ್ದರು.ನಂತರ ಬೇರೆ ಬೇರೆ ರಾಜ್ಯದ ನಿವಾಸಿಗಳ ಬ್ಯಾಂಕ್ ಖಾತೆಗಳನ್ನು ಪಡೆದು, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಿದ್ದರು. ಆ ಬ್ಯಾಂಕ್ ಖಾತೆಗಳು ಹಾಗೂ ನಂಬರ್‌ ಗಳನ್ನು ವಂಚಿಸಲು ಬಳಸುತ್ತಿದ್ದರು. ವಂಚನೆಯ ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ನಂತರ ಹಂಚಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.