2026-03-07 06:18:51

R Ashoka | ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಕಳಚಿ ಹಾಕಿದ್ದೇವೆ ವಿಪಕ್ಷ ನಾಯಕ ಆರ್ ಅಶೋಕ | Speed News Kannada

R Ashoka | ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಕಳಚಿ ಹಾಕಿದ್ದೇವೆ ವಿಪಕ್ಷ ನಾಯಕ ಆರ್ ಅಶೋಕ | Speed News Kannada

ಬೆಂಗಳೂರು: ಸಿದ್ದರಾಮಯ್ಯ ನೇತೇತ್ವದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಅಧಿವೇಶನದಲ್ಲಿ ಕಳಚಿ ಹಾಕುವಲ್ಲಿ ಯಶಸ್ವಿಯಾಗಿರುವುದಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.  ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸರ್ಕಾರ ಸಿಕ್ಕಿಕೊಂಡಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಆರು ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಲೂಟಿ ಹಗರಣಗಳ ಪಟ್ಟಿಗೆ ಹೊಸ ಸೇರ್ಪಡೆ ಎಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಗುರುವಾರ ಆರೋಪಿಸಿದ್ದಾರೆ.
ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಜತೆಗೆ ಖಜಾನೆ ಖಾಲಿಯಾಗಿದೆ. ತಮ್ಮ ಪಾಲಿನ ಶೇಕಡಾ 40 ಹಣ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು” ಎಂಬಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ವಿಬಿ ಜಿ – ರಾಮ್‌ ಜಿ” ಕಾಯ್ದೆ ವಿರುದ್ಧ ತಕರಾರು ತೆಗೆದಿದ್ದಾರೆ ಎಂದು ಟೀಕಿಸಿದರು. 
ಈ ವಾಸ್ತವ ಸಂಗತಿ ಮರೆ ಮಾಚಿ, ಇಲ್ಲಸಲ್ಲದ ಆರೋಪ ಮಾಡಿ ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಪಂಚಾಯಿತಿ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಮಾಧ್ಯಮಗಳಿಗೆ ಜಾಹಿರಾತು ಬಿಡುಗಡೆ ಮಾಡಲಾಗಿದೆ. ಹಣದ ಕೊರತೆ ಎದುರಿಸುತ್ತಿದ್ದರೂ ಜನರ ತೆರಿಗೆ ಹಣವನ್ನು ಈ ರೀತಿ ರಾಜಕೀಯ ತೆವಲುಗಳಿಗೆ ಪೋಲು ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಲೂಟಿ ಅಂಗಡಿ ಬಂದ್‌
ಮನರೇಗಾ ಯೋಜನೆಯನ್ನು ತೋಚಿದಂತೆ ಬಳಕೆ ಮಾಡಿ ಕೋಟಿಗಟ್ಟಲೇ ಹಣ ಲೂಟಿ ಮಾಡುತ್ತಿದ್ದರು. ಹೊಸ ಕಾಯ್ದೆ ಅದಕ್ಕೆಲ್ಲಾ ತೆರೆ ಎಳೆದಿದೆ. ಈಗ ಆಧುನಿಕತೆ ಸ್ಪರ್ಶದ ಜತೆ ಕಟ್ಟುನಿಟ್ಟಿನ ಹೊಸ ಕಾನೂನು ರೂಪಿಸಿದೆ. ಮಹತ್ಮಾ ಗಾಂಧಿ ಅವರ ಆಶಯದಂತೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳೊಂದಿಗೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ತಮ್ಮ ಲೂಟಿಗೆ ಅವಕಾಶ ತಪ್ಪಿ ಹೋಯಿತು ಮತ್ತು ಶೇಕಡಾ 40 ರಷ್ಟು ಹಣ ಭರಿಸಬೇಕು ಎಂಬ ಸಂಕಟದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ. ಹೀಗಾಗಿ ರಾಜ್ಯಪಾಲರ ಜತೆ ಕಾಲು ಕೆರೆದು ಜಗಳ ಮಾಡುವುದು, ಕೇಂದ್ರದ ವಿರುದ್ಧ ನಿರ್ಣಯ ಮಂಡಿಸುವ ನೆಪದಲ್ಲಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಆ ಹುನ್ನಾರಗಳಿಗೆ ಅವಕಾಶ ನೀಡದೆ ಜನತೆಗೆ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸದನದೊಳಗೆ ಬಿಜೆಪಿ ಹೋರಾಟ ಯಶಸ್ವಿಯಾಗಿದೆ ಎಂದರು.
ಅಸಂಸದೀಯ ನಡುವಳಿಕೆ 
ನಮ್ಮ ಪಕ್ಷದ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾಗ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಅವರು, ಅಸಂಸದೀಯ ರೀತಿ ವರ್ತಿಸಿದ್ದಾರೆ. ಸದನದಲ್ಲೇ ಅದನ್ನು ಖಂಡಿಸಿದ್ದೇವೆ. ಸರಿದಾರಿಯಲ್ಲಿ ಕಲಾಪ ನಡೆಸಬೇಕಿದ್ದ ಸ್ಪೀಕರ್‌ ಅವರು, ಕಾಂಗ್ರೆಸ್‌ ಪಕ್ಷದ ಪರ ಕರ್ತವ್ಯ ನಿರ್ವಹಿಸಿದ್ದಾರೆ. ಶಿವಲಿಂಗೇಗೌಡ ಅವರು ವೈಯಕ್ತಿಕ ಆರೋಪ ಮಾಡುವಾಗ ನಗುತ್ತಾ ಕುಳಿತ್ತಿದ್ದರು. ಇದು ಅತೀವ ಬೇಸರದ ವಿಷಯ ಮಾತ್ರವಲ್ಲ, ಆ ಪೀಠದ ಘನತೆಗೆ ಕುಂದು ಮಾಡಿದ ಬಗ್ಗೆ ಅಸಮಾಧಾನವಿದೆ. ಆ ಕುರಿತು ಸದನದೊಳಗೆ ಪ್ರತಿರೋಧ ವ್ಯಕ್ತಪಡಿಸಲಾಯಿತು ಎಂದರು.
ಒಟ್ಟಾರೆ ಈ ಅಧಿವೇಶನದಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಹಾಗೆಯೇ ಸರ್ಕಾರದ ಹಗರಣಗಳನ್ನು ಭ್ರಷ್ಟಾಚಾರ, ಅಕ್ರಮದ ಬಗ್ಗೆ ನಾಡಿನ ಜನತೆಯ ಗಮನ ಸೆಳೆದು ಅಧಿವೇಶನವನ್ನು ಯಶಸ್ವಿ ಮಾಡಿರುವ ತೃಪ್ತಿ ಇದೆ. ಮುಂದಿನ ಬಜೆಟ್‌ ಅಧಿವೇಶನದಲ್ಲೂ ಈ ಸರ್ಕಾರದ ಬಣ್ಣ ಬಯಲು ಮಾಡದೇ ಬಿಡುವುದಿಲ್ಲ ಎಂದೂ ಅಶೋಕ್‌ ಎಚ್ಚರಿಕೆ ನೀಡಿದರು

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.