2026-03-07 06:35:17

R Ashok CM lashes out at Kumaraswamy | ನನ್ನ ಡಿಕೆಶಿ ಸಂಬಂಧ ಹಾಳುಮಾಡಲು ನಿಮಗೆ ಸಾಧ್ಯವಿಲ್ಲ ಆರ್ ಅಶೋಕ್ ಕುಮಾರಸ್ವಾಮಿಗೆ ಸಿಎಂ ತರಾಟೆ | Speed News Kannada

R Ashok CM lashes out at Kumaraswamy | ನನ್ನ ಡಿಕೆಶಿ ಸಂಬಂಧ ಹಾಳುಮಾಡಲು ನಿಮಗೆ ಸಾಧ್ಯವಿಲ್ಲ ಆರ್ ಅಶೋಕ್ ಕುಮಾರಸ್ವಾಮಿಗೆ ಸಿಎಂ ತರಾಟೆ | Speed News Kannada

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ‘’ತಾ ಕಳ್ಳ ಇತರರ ನಂಬ’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು, ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ.‌
ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲಿ ಕೂಡಾ ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಬಳಿಯೇ ಇತ್ತು. ಅವರ ಹೇಳಿಕೆಗಳನ್ನು ಗಮನಿಸಿದರೆ ಇವರಿಬ್ಬರೂ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡುತ್ತಿರುವಂತೆ ಕಾಣಿಸುತ್ತಿದೆ.
ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಧಾನಿ ಎದುರು ಬಾಯಿ ಬಿಡಲಾಗದೆ ಕೈಕಾಲು ನಡುಗುವಂತಹ ಸ‍್ಥಿತಿ ಇರುವ ಬಿಜೆಪಿಯೂ ಅಲ್ಲ, ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಕೂಡಾ ಅಲ್ಲ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ, ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಅಂತಿಮವಾಗಿ  ನಾನು ಮತ್ತು ಶಿವಕುಮಾರ್  ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು. ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ.  ಇದೇ ಅಂತಿಮ ಸತ್ಯ.
ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಿ ಡಿ.ಕೆ.ಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಏನಾದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ದರೆ, ಅವರ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ, ಸುಳ್ಳು ಕೇಸ್ ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು ಎನ್ನುವುದು ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ.
ಕರ್ನಾಟಕದ ಇತ್ತೀಚಿನ ರಾಜಕೀಯ ಇತಿಹಾಸದ ಪುಟಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಪೋನ್ ಕದ್ದಾಲಿಕೆ, ಗೂಢಚರ್ಯೆಗಳೆಲ್ಲ ಯಾವ ಪಕ್ಷದ ದುಷ್ಕೃತ್ಯಗಳು ಎನ್ನುವುದು ಅರಿವಾಗುತ್ತದೆ. ಈ ದುರ್ಬುದ್ದಿಯ ಕಾರಣದಿಂದಾಗಿಯೇ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣ, ವಚನಭಂಗದಂತಹ ಅನಿಷ‍್ಠಗಳು ಕಾಣಿಸಿಕೊಂಡಿರುವುದು. 2004ರಿಂದ 2013 ವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಜ್ಯ ಐದು ಮುಖ್ಯಮಂತ್ರಿಗಳನ್ನು, 2018ರಿಂದ 2023ರ 5 ವರ್ಷಗಳ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಾಣುವಂತಾಗಲು ಇವರೊಳಗಿನ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಬೆನ್ನಿಗೆ ಚೂರಿ ಹಾಕುವ ಕುತಂತ್ರಗಳೇ ಕಾರಣ.
2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮಿಗಳ ಫೋನನ್ನೆ ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್ ಗಳ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು ಎನ್ನುವುದು ನೆನಪಿರಲಿ.
ಹಾಡಹಗಲೇ ಪೊಲೀಸ್, ಸಿಬಿಐ, ಇಡಿ, ಐಟಿ ಇಲಾಖೆಗಳ ದುರ್ಬಳಕೆಯಾಗುತ್ತಿರುವ ಬಗ್ಗೆ ಇಡೀ ದೇಶದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹವರು ತಮ್ಮ ರಾಜಕೀಯ ವಿರೋಧಿಗಳ ಫೋನ್‌ ಗಳನ್ನು ಕದ್ದು ಆಲಿಸದೆ ಬಿಡುತ್ತಾರೆಯೇ? ಆದರೆ ಇಂತಹ ಬೆದರಿಕೆಗಳಿಗೆ ನಾನಾಗಲಿ, ನನ್ನ ಪಕ್ಷದ ಯಾವ ನಾಯಕರಾಗಲಿ ಜಗ್ಗುವವರಲ್ಲ, ಬಗ್ಗುವವರೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ.
ಹೆಚ್.ಡಿ.ಕುಮಾರಸ್ವಾಮಿ ಮತ್ತು ಆರ್ ಅಶೋಕ್ ಅವರು ತಮ್ಮ ಅಮೂಲ್ಯ ಕ್ಷಣಗಳನ್ನು ಈ ರೀತಿ ಕುಟಿಲ ರಾಜಕೀಯದಲ್ಲಿ ವ್ಯರ್ಥಮಾಡುವ ಬದಲಿಗೆ ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ. ರಾಜ್ಯದ ಪ್ರಜ್ಞಾವಂತ ಮತದಾರರು ಐದು ವರ್ಷಗಳ ಕಾಲ ಸರ್ಕಾರ ನಡೆಸಲು ನಮಗೆ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರ-ಕುಚೇಷ್ಠೆಗಳ ನಡುವೆಯೂ ಈ ಅವಧಿಯನ್ನು ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.