ಬೆಂಗಳೂರು: ಭಾರತೀಯರಲ್ಲದ ವಿದೇಶಿಯರಿಗೆ ಸುಲಭವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿರುವ ವ್ಯವಸ್ಥೆಯನ್ನು ಗಮನಿಸಿದರೆ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಬಾಂಗ್ಲಾದೇಶದ ವ್ಯಕ್ತಿಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟ ಆರೋಪದಡಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪಶ್ಚಿಮ ಬಂಗಾಳದ, ಅರ್ನಾಬ್ ಮಂಡಲ್ (28) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು, ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಕ್ಷಿತ್ ವಾದಿಸಿ, ಅರ್ಜಿದಾರರ ವಿರುದ್ಧ ಹೊರಿಸಲಾಗಿರುವ ಅಪರಾಧಿಕ ಕಲಂಗಳು ನಕಲಿ ಆಧಾರ್ ಕಾರ್ಡ್ ಮಾಡಿದ ಆರೋಪಕ್ಕೆ ಅನ್ವಯವಾಗುವುದಿಲ್ಲ. ಅರ್ಜಿದಾರ ವಿದೇಶಿಯನಲ್ಲ. ಹಾಗಾಗಿ, ಅನ್ವಯಿಸಲಾಗಿರುವ ವಿದೇಶಿಯರ ಕಾಯ್ದೆಯ ಕಲಂ 14 ಇಲ್ಲಿ ಊರ್ಜಿತವಾಗುವುದಿಲ್ಲ. ಅರ್ಜಿದಾರರು 2024ರ ಆರಂಭದಿಂದಲೂ ಕಸ್ಟಡಿಯಲ್ಲಿದ್ದು, ಈಗಾಗಲೇ ಶಿಕ್ಷೆಯ ಅರ್ಧ ಭಾಗವನ್ನು ಜೈಲಿನಲ್ಲೇ ಕಳೆದಿದ್ದಾರೆ ಎಂದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನೀವು ಮಾಡಿಕೊಡುವ ನಕಲಿ ಆಧಾರ್ ಕಾರ್ಡ್ ಈ ದೇಶದ ಹಕ್ಕುಗಳಿಗೆ ಮತ್ತು ಇತರೆಲ್ಲಾ ದಾಖಲೆಗಳಿಗೂ ಪ್ರಮುಖ ಅಡಿಪಾಯವಾಗುತ್ತದೆ. ಈ ಮೂಲಕ ನೀವು ಎಲ್ಲವನ್ನೂ ನಾಶಪಡಿಸುತ್ತಿದ್ದೀರಿ. ಅರ್ಜಿದಾರರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ನಕಲಿ ಆಧಾರ್ ನೀಡುತ್ತಾ ಎಷ್ಟು ಮಂದಿ ವಿದೇಶಿಯರನ್ನು ಹೀಗೆ ಭಾರತದ ಒಳಗೆ ನುಸುಳಲು ಬಿಡುತ್ತೀರಿ? ನಿಮ್ಮ ಮನೆ ಬಾಗಿಲಿಗೆ ಯಾರು ಬಂದರೂ ಆಧಾರ್ ಕಾರ್ಡ್ ಮಾಡಿಕೊಡುತ್ತೀರಾ? ನಿಮ್ಮಂಥವರಿಂದ ವ್ಯವಸ್ಥೆ ನಾಶವಾಗುತ್ತಿದೆ? ನಕಲಿ ಆಧಾರ್ ಕಾರ್ಡ್ ಮಾಡಿಕೊಡುವುದು ವ್ಯಾಪಕವಾಗಿದೆ. ಆದರೂ ನೀವು ಯಾವುದೇ ಅಪರಾಧವಾಗಿಲ್ಲ ಎನ್ನುತ್ತಿದ್ದೀರಿ. ದೇಶದ ಬಗ್ಗೆ ಸ್ವಲ್ಪ ಕಾಳಜಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿತು.
ಅರ್ಜಿದಾರರು ಜೈಲಿನಲ್ಲಿರುವುದೇ ಸರಿ. ನೀವೇನಾದರೂ ಬೇರೆ ಪರಿಹಾರ ಕೇಳಿದ್ದರೆ ಪರಿಶೀಲನೆ ಮಾಡಬಹುದಿತ್ತು. ಬಿಡುಗಡೆಗಂತೂ ಆದೇಶ ಮಾಡಲಾಗದು. ಪ್ರಕರಣ ರದ್ದುಪಡಿಸಲೂ ಸಾಧ್ಯವಿಲ್ಲ. ಒಂದು ವೇಳೆ ನಾನೇದಾರೂ ಆದೇಶ ಬರೆಸಿದರೆ ಜಾಮೀನು ಅರ್ಜಿ ಹಾಕಿಕೊಳ್ಳಲೂ ನಿಮಗೆ ಕಷ್ಟವಾಗುತ್ತದೆ. ವಿಚಾರಣೆ ಪೂರ್ಣಗೊಳಿಸಲು ಸಕ್ಷಮ ನ್ಯಾಯಾಲಯಕ್ಕೆ ಆದೇಶಿಸುತ್ತೇನೆ ಎಂದು ಎಚ್ಚರಿಸಿದರು.
ನಂತರ ವಕೀಲರು ಅರ್ಜಿ ವಾಪಸ್ ಪಡೆದರು. ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಹಾಜರಿದ್ದರು.