2026-06-08 01:24:52

Priyank Kharge-Vijayendra talk war | ಕಲಬುರಗಿಯಲ್ಲಿ ಐಟಿಬಿಟಿ ಕಂಪನಿಗಳು ಏಕಿಲ್ಲ ಪ್ರಿಯಾಂಕ್‌ ಖರ್ಗೆ ವಿಜಯೇಂದ್ರ ಟಾಕ್‌ ವಾರ್‌ | Speed News Kannada

Priyank Kharge-Vijayendra talk war | ಕಲಬುರಗಿಯಲ್ಲಿ ಐಟಿಬಿಟಿ ಕಂಪನಿಗಳು ಏಕಿಲ್ಲ ಪ್ರಿಯಾಂಕ್‌ ಖರ್ಗೆ ವಿಜಯೇಂದ್ರ ಟಾಕ್‌ ವಾರ್‌ | Speed News Kannada

ಬೆಂಗಳೂರು: ಕೋಮು ಗಲಭೆಗಳಿಂದ ಕರಾವಳಿಯಲ್ಲಿ ಇರುವ ಐಟಿಬಿಟಿಕಂಪನಿಗಳು ಹೊರ ಹೋಗಲು ಬಯಸುತ್ತಿವೆ ಎಂಬ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆ ಜಟಾಪಟಿಗೆ ಕಾರಣವಾಗಿದೆ. 
ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಎಕ್ಸ್‌ ನಲ್ಲಿ ತಿರುಗೇಟು ನೀಡಿದ್ದಾರೆ. 
ಕಲಬುರಗಿಯಲ್ಲಿ ಯಾಕೆ ಐಟಿ-ಬಿಟಿ ಕಂಪನಿಗಳು ಕಾಲಿಟ್ಟಿಲ್ಲ ಎನ್ನುವುದರ ಕಡೆಗೆ ಗಮನ ಹರಿಸಿ ಕರಾವಳಿಯ ಮಣ್ಣಿನ ಗುಣ ಮತ್ತು ಅಲ್ಲಿನ ಜನರ ಉದ್ಯಮಶೀಲತೆಯನ್ನು, ಪ್ರಗತಿಯನ್ನು, ತಮ್ಮ ಕೀಳು ರಾಜಕೀಯದ ಕಾಮಾಲೆ ಕಣ್ಣಿನಿಂದ ನೋಡದೆ, ವಾಸ್ತವ ನೆಲೆಗಟ್ಟಿನಲ್ಲಿ ನೋಡಿ ಎಂದಿದ್ದಾರೆ.
ಕರಾವಳಿಗೆ ಕೋಮುವಾದದ ಹಣೆಪಟ್ಟಿ ಹಚ್ಚುವ ಅವರ ವ್ಯರ್ಥ ಪ್ರಯತ್ನ ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ಕರಾವಳಿ ಕರ್ನಾಟಕ ತನ್ನ ಸ್ವಂತ ಶಕ್ತಿಯಿಂದ, IT-BT ಸೇರಿದಂತೆ ಶಿಕ್ಷಣ, ಬ್ಯಾಂಕಿಂಗ್ ಮತ್ತು ಉದ್ಯಮ ರಂಗದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಅಂತಹ ನಮ್ಮ ಹೆಮ್ಮೆಯ ಕರಾವಳಿ ಜಿಲ್ಲೆಗಳ ಕುರಿತು, ಅನಗತ್ಯವಾಗಿ ಬಂಡವಾಳ ಹೂಡಿಕೆದಾರರನ್ನು ಹೆದರಿಸುವ ಕೆಲಸವನ್ನು ಸ್ವತಃ ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವರೇ ಮಾಡುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.
ವಿಜಯೇಂದ್ರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್‌ ಖರ್ಗೆ, ಕಲ್ಯಾಣ ಕರ್ನಾಟಕಕ್ಕೆಆರ್ಟಿಕಲ್ 371ಜೆ ವಿಶೇಷ ಸ್ಥಾನಮಾನ ನೀಡಲು ಬಿಜೆಪಿಯ ಕೇಂದ್ರ ಸರ್ಕಾರ ನಿರಾಕರಿಸುತ್ತಿರಲಿಲ್ಲ. ಹಿಂದುಳಿದ ಈ ಪ್ರದೇಶವನ್ನು ಮುಂದೆ ತರುವ ಇಚ್ಛಾಶಕ್ತಿ ಬಿಜೆಪಿಗೆ ಇರಲಿಲ್ಲವೇಕೆ? ಆರ್ಟಿಕಲ್ 371ಜೆ ಸ್ಥಾನಮಾನ ನೀಡಲು ಆಡ್ವಾಣಿಯವರು ನಿರಾಕರಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.  ನಿಮ್ಮ ತಂದೆಯವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರಲ್ಲವೇ, ಶಿವಮೊಗ್ಗವನ್ನು  ಸಿಂಗಾಪುರದಂತೆ ಮಾಡಲಾಗಲಿಲ್ಲವೇಕೆ? ಹೋಗಲಿ, ಬೆಂಗಳೂರಿನ ಮಟ್ಟಕ್ಕಾದರೂ ತರಲಾಗಲಿಲ್ಲವೇಕೆ? ಎಂದೂ ಪ್ರಶ್ನಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.