2026-06-08 01:33:10

priyank kharge shares yogi adityanath speech | ಮಹಿಳೆಯರಿಗೆ ಮೀಸಲಾತಿ ಕೊಟ್ಟರೆ ಅವರು ರಾಕ್ಷಸರಾಗುತ್ತಾರೆ”: ಯೋಗಿ ಆದಿತ್ಯನಾಥ ಹೇಳಿಕೆ ಹಂಚಿಕೊಂಡ ಪ್ರಿಯಾಂಕ್‌ ಖರ್ಗೆ| Speed News Kannada

priyank kharge shares yogi adityanath speech | ಮಹಿಳೆಯರಿಗೆ ಮೀಸಲಾತಿ ಕೊಟ್ಟರೆ ಅವರು ರಾಕ್ಷಸರಾಗುತ್ತಾರೆ”: ಯೋಗಿ ಆದಿತ್ಯನಾಥ ಹೇಳಿಕೆ ಹಂಚಿಕೊಂಡ ಪ್ರಿಯಾಂಕ್‌ ಖರ್ಗೆ| Speed News Kannada

ಬೆಂಗಳೂರು: ಮಹಿಳಾ ಮೀಸಲಾತಿ ಕುರಿತು ಬಿಜೆಪಿ ಕಪಟ ನಾಟಕವಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಮಹಿಳೆಯರಿಗೆ ಮೀಸಲಾತಿ ಕೊಟ್ಟರೆ ಏನಾಗುತ್ತದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದ ಹೇಳಿಕೆಯ ತುಣುಕನ್ನು ಹಂಚಿಕೊಂಡಿದ್ದಾರೆ.

ಬಿಜೆಪಿಗೆ ಈಗ ಇದ್ದಕ್ಕಿದ್ದಂತೆ ಏಕಾಏಕಿ ಮಹಿಳೆಯರ ಬಗ್ಗೆ ಕಾಳಜಿ ಬಂದಿದೆ, ಆ ಕಪಟ ನಾಟಕದ ಕಾಳಜಿಯನ್ನು ಈ ದೇಶದ ಮಹಿಳೆಯರು ನಂಬುವ ಸ್ಥಿತಿಯಲ್ಲಿ ಇಲ್ಲ. ಬಿಜೆಪಿಗೆ ನಿಜವಾಗಿಯೂ ಮಹಿಳೆಯರಿಗೆ ರಾಜಕೀಯ ಶಕ್ತಿ ತುಂಬುವ ಇಚ್ಛೆ ಇದ್ದಿದ್ದೇ ಆದರೆ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 33% ಬೇಡ, ಕನಿಷ್ಠ 20%ನಷ್ಟಾದರೂ ಮಹಿಳೆಯರಿಗೆ ಟಿಕೆಟ್ ನೀಡಿ ತಮ್ಮ ಕಾಳಜಿಯನ್ನು ನಿರೂಪಿಸಬಹುದಿತ್ತು, ಆದರೆ ಕೊಟ್ಟಿರುವುದು 11% ಮಹಿಳೆಯರಿಗೆ ಮಾತ್ರ ಎಂದು ಟೀಕಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ನೀತಿಪಾಠ ಬೇಕಿಲ್ಲ. ಈ ಚರ್ಚೆಗಳು ಒಂದೆಡೆ ಇರಲಿ, ಬಹುಮುಖ್ಯ ವಿಷಯಕ್ಕೆ ಬರೋಣ.. 2010ರಲ್ಲಿ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿಯ ಬಿಲ್ ಮಂಡಿಸಿದ್ದಾಗ ಬಿಜೆಪಿಯ "ಕಪಟ ಸನ್ಯಾಸಿ" ಯೋಗಿ ಆದಿತ್ಯನಾಥ್ ಏನು ಹೇಳಿದ್ದರು ಗೊತ್ತೇ? "ಈ ಮಸೂದೆ ಜಾರಿಗೆ ಬಂದರೆ ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಮುಳುಗಿಸುತ್ತದೆ, ಪುರುಷರು ಸ್ತ್ರೀಯರ ಲಕ್ಷಣಗಳನ್ನು ಬೆಳೆಸಿಕೊಂಡರೆ ಅವರು ದೇವರಾಗುತ್ತಾರೆ, ಆದರೆ ಮಹಿಳೆಯರು ಪುರುಷತ್ವವನ್ನು ಬೆಳೆಸಿಕೊಂಡರೆ ಅವರು ರಾಕ್ಷಸರಾಗುತ್ತಾರೆ..." ಎಂಬ ಯೋಗಿ ಅದಿತ್ಯನಾಥರ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ರಾಜಕೀಯವಾಗಿ ಸಭಲರಾದರೆ ರಾಕ್ಷಸರಾಗುತ್ತಾರಂತೆ! ಅಧಿತ್ಯನಾಥರ ಇನ್ನೂ ಒಂದು ಹೇಳಿಕೆ "ಮಹಿಳೆಯರು ಸ್ವತಂತ್ರವಾಗಿರಲು ಅನರ್ಹರು, ಅವರನ್ನು ರಕ್ಷಣೆಯಲ್ಲಿಡಬೇಕೆ ಹೊರತು ಸ್ವತಂತ್ರವಾಗಿ ಅಲ್ಲ" ಇಷ್ಟೇ ಅಲ್ಲ, ಬಿಜೆಪಿಯ ಮಾತೃಸಂಸ್ಥೆ RSSಗೆ ಮಹಿಳೆಯರ ಬಗ್ಗೆ ಯಾವ ಅಭಿಪ್ರಾಯ ಇದೆ ಎಂಬುದನ್ನು ಒಮ್ಮೆ ಕೇಳಿ, ಅವರ ಅಪ್ಪಣೆ ಪಡೆದು ನಂತರ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದರೆ ಒಳಿತು.. "ಮಹಿಳೆಯರು ಮನೆಯ ಹೊಸಿಲಿನ ಒಳಗೆಯೇ ಇರಬೇಕು, ಪುರುಷರು ಮಾತ್ರ ಹೊರಗಿನ ವ್ಯವಹಾರಗಳನ್ನು ನಿರ್ವಹಿಸಬೇಕು" ಇದನ್ನು ಮೋಹನ್ ಬಾಗವತ್ ಎರಡೆರಡು ಬಾರಿ ಪ್ರತಿಪಾದಿಸಿದ್ದಾರೆ. ಬಿಜೆಪಿ, RSS ಮಾತು ಕೇಳುತ್ತದೆಯೇ? ಅಥವಾ ದಿಕ್ಕರಿಸುತ್ತದೆಯೇ? ಇದನ್ನು ಮೊದಲು ಸ್ಪಷ್ಟಪಡಿಸಲಿ ಎಂದೂ ಪ್ರಿಯಾಂಕ್‌ ಖರ್ಗೆ ತಾಕೀತು ಮಾಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.