ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂಚಿಕೆಯಲ್ಲಿ ವಿದ್ಯಾರ್ಥಿಯೊಬ್ಬರು, ಓದಿನ ಜೊತೆಗೆ ಗೇಮಿಂಗ್ ಅನ್ನು ಸಮತೋಲನಗೊಳಿಸುವುದು ಹೇಗೆ ಮತ್ತು ಗೇಮಿಂಗ್ ಅನ್ನು ವೃತ್ತಿಯಾಗಿ ಗಂಭೀರವಾಗಿ ತೆಗೆದುಕೊಳ್ಳಲು ಬಯಸಿದ್ದು, ತಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆಯೇ ಎಂಬ ಸಂದೇಹ ವ್ಯಕ್ತಪಡಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿಯವರು, ಹವ್ಯಾಸವನ್ನು ಅರ್ಥಪೂರ್ಣ ಸಾಧನೆಯನ್ನಾಗಿ ಪರಿವರ್ತಿಸಲು ಒಬ್ಬರ ಸೃಜನಶೀಲತೆಯನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಮತ್ತು ನಿರಂತರವಾಗಿ ಕಲಿಯಬೇಕು ಎಂದು ಹೇಳಿದರು. ಗೇಮಿಂಗ್ ಅನ್ನು ಒಂದು ಅಮೂಲ್ಯವಾದ ಕೌಶಲ್ಯ ಎಂದು ಬಣ್ಣಿಸಿದ ಅವರು, ಭಾರತವು ಕಥೆಗಳಿಂದ ಸಮೃದ್ಧವಾಗಿರುವ ನಾಡು ಎಂದು ವಿವರಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವ ಸೃಜನಶೀಲತೆಯನ್ನು ಉತ್ತೇಜಿಸಿದ ಪ್ರಧಾನಿಯವರು, ಪಂಚತಂತ್ರ ಮತ್ತು ಮಹಾಭಾರತದಿಂದ ಸ್ಫೂರ್ತಿ ಪಡೆದ ವಿಡಿಯೋ ಗೇಮ್ ಗಳನ್ನು ತಯಾರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು, ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಚಟುವಟಿಕೆಯಿಂದ ಕೂಡಿದ ವಿದ್ಯಾರ್ಥಿಗಳು ಕೇಳಿದ ಹಲವಾರು ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರಧಾನಮಂತ್ರಿಯವರು ಮೌಲ್ಯಯುತವಾದ'ಮಂತ್ರ'ಗಳನ್ನು ಹಂಚಿಕೊಂಡರು.
ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದರಿಂದ ಹಿಡಿದು ಓದು, ಕೌಶಲ್ಯ ಮತ್ತು ಹವ್ಯಾಸಗಳ ನಡುವೆ ಸಮತೋಲನ ಕಾಯ್ದುಕೊಳ್ಳುವವರೆಗೆ ಹಾಗೂ ಸದಾ ದೊಡ್ಡದಾಗಿ ಕನಸು ಕಾಣುವವರೆಗೆ, ಪ್ರಧಾನಿಯವರ ಈ ಮಂತ್ರಗಳು ವಿದ್ಯಾರ್ಥಿಗಳಲ್ಲಿ ಕೇವಲ ಪ್ರೋತ್ಸಾಹವನ್ನು ಮಾತ್ರವಲ್ಲದೆ, ಅವರ ಹೊರೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಸಕಾರಾತ್ಮಕತೆಯನ್ನು ತುಂಬಿವೆ ಎಂದು ಹೇಳಿದರು.