ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ ಪೂರ್ಣಗೊಂಡಿದ್ದು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿ, ಗೌರವ ಸಲ್ಲಿಸಿದ್ದಾರೆ. ಜೊತೆಗೆ ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ ಎಂದು ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮೋದಿಯವರು ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕಳೆದ ವರ್ಷ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ದಾಳಿಯಲ್ಲಿ ಬಲಿಯಾದ ಮುಗ್ಧ ಜನರ ಕುಟುಂಬಗಳಿಗೆ ಮೋದಿ ಸಂತಾಪ ಸೂಚಿಸಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದರು. ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು. ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರ ಈ ಕೃತ್ಯಕ್ಕೆ ಭಾರತ ಮೌನವಾಗಿರಲಿಲ್ಲ. ದಾಳಿ ನಡೆದ ಕೇವಲ 15 ದಿನಗಳಲ್ಲಿ, ಅಂದರೆ ಮೇ 7ರಂದು ಭಾರತೀಯ ವಾಯುಪಡೆ ಮತ್ತು ವಿಶೇಷ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತ್ತು. ಇದರ ಗುರಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಹುಟ್ಟಡಗಿಸುವುದಾಗಿತ್ತು. ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ. ಭಯೋತ್ಪಾದಕರ ಹೇಯ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಮೋದಿಯವರು ಗುಡುಗಿದ್ದಾರೆ.