2026-06-08 01:20:32

ಬೆಲೆ ಏರಿಕೆಗೆ ಪ್ರಧಾನಿ ಮೋದಿ ನೇರ ಕಾರಣ; ಸಾಧನಾ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ ಸಿ.ಎಂ ಸಿದ್ದರಾಮಯ್ಯ|Speed News Kannada

ಬೆಲೆ ಏರಿಕೆಗೆ ಪ್ರಧಾನಿ ಮೋದಿ ನೇರ ಕಾರಣ; ಸಾಧನಾ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ  ಸಿ.ಎಂ ಸಿದ್ದರಾಮಯ್ಯ|Speed News Kannada

ತುಮಕೂರು: ಇವತ್ತು ದೇಶದಲ್ಲಿ ಬೆಲೆ ಏರಿಕೆಗೆ ಪ್ರಧಾನಿ ಮೋದಿ ಅವರೇ ನೇರ ಕಾರಣ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಹಿಂದಿನ ಯುಪಿಎ ಸರ್ಕಾರದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ? ಇದನ್ನು ನಾವು ಅಚ್ಛೇ ದಿನ್ ಎಂದು ಕರೆಯಬೇಕಾ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ, "ಮೂರು ವರ್ಷಗಳ ಸಾಧನಾ ಸಮರ್ಪಣಾ" ಸಮಾವೇಶ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ, "ನವ ಕರ್ನಾಟಕ" ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಅಂಬಾನಿ, ಅದಾನಿ ಅವರ ಅಭಿವೃದ್ದಿ ಆಗಿದೆ. ಬಹಳಷ್ಟು ಜನ ಮೋದಿ ಮೋದಿ ಎಂದು ಮತ ಚಲಾಯಿಸಿದರು. ಆದರೆ ವೋಟ್ ಹಾಕಿದವರಿಗೆ ಭ್ರಮ ನಿರಸನ ಆಗಿದೆ. ಪ್ರಧಾನಿ ಮೋದಿ ಟ್ರಂಪ್ ಬಾಲ ಹಿಡ್ಕೊಂಡು ಓಡಾಡುತ್ತಿದ್ದಾರೆ. ಇರಾಕ್‌ ಜತೆ ಸೇರಿ ಅಮೆರಿಕ ಇರಾನ್ ಮೇಲೆದಾಳಿ ನಡಸಿ ಸರಣಿ ಹತ್ಯೆಗಳನ್ನೇ ನಡೆಸಿದರೂ ಮೋದಿ ವಿಷಾದವನ್ನೇ ಹೇಳಲಿಲ್ಲ ಎಂದು ಟೀಕಿಸಿದರು.

ನಾವು ಅಧಿಕಾರಕ್ಕೆ ಬಂದ 3 ವರ್ಷದಲ್ಲಿ ಅನೇಕ ಕಾರ್ಯಕ್ರಮ ಜಾರಿ. ನಾವು 2028ಕ್ಕೂ ಅಧಿಕಾರಕ್ಕೆ ಬಂದೇ ಬರುತ್ತೇವೆ. ಈ ರಾಜ್ಯದ ಸರ್ವತೋಮುಖ ಅಭಿವೃದ್ದಿ ಮಾಡುತ್ತೇವೆ. ನಾವು 2028ಕ್ಕೆ ಕೊಡುವಂತಹ ಪ್ರಣಾಳಿಕೆಗೆ ಎಲ್ಲರಿಗೂ ಶಕ್ತಿಕೊಡುತ್ತದೆ ಎಂದರು. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ನಮ್ಮ ಮೂಲ ಮಂತ್ರ. ಸರ್ವರಿಗೂ ನ್ಯಾಯ ಸಿಗಬೇಕು ಎನ್ನುವುದೇ ನಮ್ಮ ಆಶಯ. ನಮ್ಮ ಗ್ಯಾರಂಟಿಗಳ ಜಾರಿಯಿಂದ ತಲಾದಾಯ ಹೆಚ್ಚಳವಾಗಿದೆ. ಇಡೀ ದೇಶದಲ್ಲೇ ಕರ್ನಾಟಕದ ಜಿಎಸ್ ಟಿ ಬೆಳವಣಿಗೆಯಲ್ಲಿ ಮುಂದಿದೆ. ನಮ್ಮ ರಾಜ್ಯದ GSDP ಶೇ. 8.1ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದರು.

ನೀಟ್‌ ಅಕ್ರಮಕ್ಕೆ ಮೋದಿ ಹೊಣೆ:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 22 ಲಕ್ಷ ವಿದ್ಯಾರ್ಥಿಗಳಿಗೆ ದ್ರೋಹವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಹೊರಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಗೆ ನೇರ ಕಾರಣ ನರೇಂದ್ರ ಮೋದಿ. CET ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಲಹೆ ನೀಡಿದ್ದರೂ ನಮ್ಮ ಸಲಹೆ ಉಲ್ಲಂಘಿಸಿ ನೀಟ್ ಪರೀಕ್ಷೆ ಮಾಡಿದ್ದಾರೆ. ಈಗ ಗೊMದಲ ಉಂಟಾಗಿದೆ ಎಂದು ಟೀಕಿಸಿದರು.

ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದಾರೆ. ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಮೋದಿ ಸರ್ಕಾರವೇ ನೇರಹೊಣೆ. ಈ ದೇಶದಲ್ಲಿ 60% ನಿರುದ್ಯೋಗ ಇದೆ. ಮೋದಿ ಪ್ರತಿವರ್ಷ ಉದ್ಯೋಗ ಕೊಡ್ತೇವೆ ಎಂದು ಹೇಳಿದರು. ಆದರೆ ಅಧಿಕಾರಕ್ಕೆ ಬಂದು 12 ವರ್ಷವಾದರೂ ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡಲು ಆಗಲಿಲ್ಲ. ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ಮೋದಿ ಅವರು 123 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎMದು ಟೀಕಾಪ್ರಹಾರ ನಡೆಸಿದರು.

ಕಳೆದ ಚುನಾವಣೆ ವೇಳೆ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ.  ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಗುಜರಾತ್ ಮಾದರಿ ಟೊಳ್ಳು:

35 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೂ ಅಭಿವೃದ್ಧಿ ಆಗಿಲ್ಲ. ಮೊನ್ನೆಯಷ್ಟೇ ಕೇವಲ 2500 ರೂ ಮನೆ ಬಾಡಿಗೆ ಕಟ್ಟಲಾಗದ ಕಾರಣಕ್ಕೆ ಬಾಡಿಗೆಗಿದ್ದ ಬಡ ಕುಟುಂಬದ 13 ವರ್ಷದ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಅಲ್ಲಿ ನಡೆದಿದೆ. ಇದು ನಿಜವಾದ ಗುಜರಾತ್ ಮಾದರಿ.  ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು ಎಂದು ವ್ಯಂಗ್ಯವಾಡಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.