ಮಥುರಾ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಗೆ ವೃಂದಾವನದ ಧರ್ಮಗುರು ಪ್ರೇಮಾನಂದ ಗೋವಿಂದ ಶರಣ ಜೀ ಮಹಾರಾಜ್ ಅವರನ್ನು ಭೇಟಿಯಾಗಿದ್ದಾರೆ. ಸಾಮಾನ್ಯರಂತೆ ಭಕ್ತರೊಂದಿಗೆ ಕುಳಿತುಕೊಂಡು ಪ್ರೇಮಾನಂದ ಸ್ವಾಮೀಜಿ ಅವರ ಪ್ರವಚನವನ್ನು ಆಲಿಸಿದ್ದಾರೆ.
ವಿರಾಟ್ ಕೊಹ್ಲಿ ದಂಪತಿ ಭಕ್ತಿಯಿಂದ ಕುಳಿತ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.'ಕಠಿಣ ಸಮಯಗಳು ನಿಜವಾದ ಭಕ್ತರನ್ನು ಪರೀಕ್ಷೆಗೆ ಒಡ್ಡುತ್ತವೆ. ಜನರು ನಾಟಕೀಯವಾಗಿ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ದೇವರು ಒಲಿಯುವುದಿಲ್ಲ. ದೇವರನ್ನು ಪ್ರೀತಿಯಿಂದ ಆರಾಧಿಸಬೇಕು' ಎಂದು ಪ್ರೇಮಾನಂದ ಸ್ವಾಮೀಜಿ ಬೋಧಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ ಆಶ್ರಮಕ್ಕೆ ಭೇಟಿ ನೀಡಿದ್ದ ಕೊಹ್ಲಿ ದಂಪತಿ ಹಲವು ಸಮಯ ಅಲ್ಲಿಯೇ ಕಳೆದಿದ್ದಾರೆ. ಈ ಹಿಂದೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಳಿಕ 2025ರ ಮೇ 13ರಂದು ಕೊಹ್ಲಿ ದಂಪತಿ ಸ್ವಾಮಿಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು ಹಲವು ಸಲ ವಿರಾಟ್ ದಂಪತಿ ಸ್ವಾಮೀಜಿಯನ್ನು ಭೇಟಿಯಾಗಿದ್ದರು.