ಶಿವಮೊಗ್ಗ: ರಾಜ್ಯದಲ್ಲಿ ಆಕಾಲಿಕ ಮಳೆಯಿಂದ ಜಲ ಕಂಟಕ ಎದುರಾಗಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದರಿಂದ ನಿಗದಿತ ಸಮಯದಲ್ಲಿ ಮಳೆಯಾಗದೆ, ಅನಿರೀಕ್ಷಿತ ಸಮಯದಲ್ಲಿ ಮಳೆಯಾಗಲಿದೆ. ಈ ಮಳೆಯು ಕೃಷಿ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದ್ದಾರೆ.
ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಾತನಾಡಿದ ಅವರು. ದೇಶದಲ್ಲಿ ಸಕಾಲಿಕವಾಗಿ ಮಳೆಯಾಗದೆ ಹೋದರೂ, ಅಕಾಲಿಕವಾಗಿ ಸುರಿಯುವ ಮಳೆಯಿಂದಾಗಿ ಜಲಕಂಟಕ ಎದುರಾಗಲಿದೆ. ಮಳೆ, ಗುಡುಗು ಮತ್ತು ಸಿಡಿಲಿನ ಆರ್ಭಟ ಹೆಚ್ಚಾಗಲಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆಯಾಗದೆ, ಅಕಾಲಿಕ ಸಮಯದಲ್ಲಿ ಮಳೆಯಾಗಿ ಕೃಷಿ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕೆಲವು ಆಕಸ್ಮಿಕ ಘಟನೆಗಳು ಭಯವನ್ನುಂಟು ಮಾಡಲಿವೆ. ವಿಶೇಷವಾಗಿ ದೊಡ್ಡ ದೊಡ್ಡ ನಗರಗಳು ಪ್ರಕೃತಿ ವಿಕೋಪ ಅಥವಾ ಆಕಸ್ಮಿಕ ಅನಾಹುತಗಳಿಂದ ಆಪತ್ತನ್ನು ಎದುರಿಸಲಿವೆ. ಆದರೂ ರಾಜ್ಯದಲ್ಲಿ ಮಳೆ ಮತ್ತು ಬೆಳೆ ಉತ್ತಮವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ದೇಶ ಮತ್ತು ರಾಜ್ಯ ರಾಜಕಾರಣ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅರಸನ ಅರಮನೆ ಕಳೆಗುಂದಿತು ಮತ್ತು ಪಟ್ಟದ ಆನೆ ಗಾಂಭೀರ್ಯದಿಂದ ನಡೆದೀತು ಎಂದು ಒಗಟಿನ ರೀತಿಯಲ್ಲಿ ಉತ್ತರಿಸಿದ್ದಾರೆ. ದೇಶ ಮತ್ತು ರಾಜ್ಯ ಅಧಿಕಾರ ಕೇಂದ್ರಗಳಲ್ಲಿ ಬದಲಾವಣೆ ಆಗಬಹುದು ಎಂಬ ಮುನ್ಸೂಚನೆ ಇದಾಗಿದೆ.