ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪೋಕ್ಸೋ ಆರೋಪ ಸುತ್ತಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀಗಳು ಇಂದು ಹರಿಹರ ಗ್ರಾಮಾಂತರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರು ಇವರನ್ನು ಸುಮಾರು 5 ಗಂಟೆ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ.
ಕಳೆದ ವಾರ ಮಠದ ವಸತಿನಿಲಯದ ವಿದ್ಯಾರ್ಥಿಗಳಿಗೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುಳಾ ನೇತೃತ್ವದ ತಂಡ, ಇಂದು ವಚನಾನಂದ ಶ್ರೀಗಳನ್ನು ವಿಚಾರಣೆಗೆ ನಡೆಸಿದೆ. ನಂತರ ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ.
ಈ ಮಧ್ಯೆ ವಚನಾನಂದ ಸ್ವಾಮೀಜಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು, ಬಂಧನದಿಂದ ಪಾರಾಗಿದ್ದಾರೆ.
ಮಠದಲ್ಲಿರುವ ವಿದ್ಯಾರ್ಥಿಗಳ ಮಾಹಿತಿ, ಮಕ್ಕಳ ಮೇಲೆ ದೌರ್ಜನ್ಯ, ಮಕ್ಕಳ ಖಾಸಗಿ ಭಾಗ ಮುಟ್ಟಿ ದೌರ್ಜನ್ಯ ಎಸಗಿದೆ ಎಂಬ ಆರೋಪಗಳನ್ನು ಕುರಿತ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲಾಗಿದೆ.
ವಿಚಾರಣೆ ನಂತರ ಪೊಲೀಸರು ಸ್ವಾಮೀಜಿಯನ್ನು ಹರಿಹರ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಇದು ಮಠದ ಟ್ರಸ್ಟಿಗಳ ಷಡ್ಯಂತ್ರ ಎಂದು ಸ್ವಾಮೀಜಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.