ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಅವರು ಕೇವಲ ಮಾತಿನ ಮಲ್ಲ. ಅವರಿಗೆ ದೇಶದ ಜನರ ಕಾಳಜಿ ಇಲ್ಲ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ಸಿಲಿಂಡರ್ ದರ ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಲೇ ಇದ್ದಾರೆ. ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ದೇಶದ ಮತದಾರರು ಮೋದಿ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ, ದೇಶದ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲವಾಗಿದೆ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಕೇವಲ ಮಾತಿನಲ್ಲೇ ಮನೆ ಕಟ್ಟುತ್ತಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರ ಪ್ರತಿಯೊಂದು ವಿಷಯಕ್ಕೂ ಪ್ರತಿಪಕ್ಷಗಳನ್ನು ಟೀಕಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷಗಳು ದೇಶದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ದೂರುತ್ತಿದೆ. ಆದರೆ ಪ್ರತಿಪಕ್ಷಗಳು ಯಾವತ್ತೂ ದೇಶದ ಪರವಾಗಿಯೇ ಇವೆ. ಜನರ ಬಗೆಗೆ ಚಿಂತನೆ ಮಾಡುತ್ತಿವೆ. ಬಿಜೆಪಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿಲ್ಲ. ಹಣದುಬ್ಬರ ಏರುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ನರೇಗಾ ಯೋಜನೆಯನ್ನೂ ದುರ್ಬಲಗೊಳಿಸಿದೆ. ಪ್ರಧಾನಿ ಮೋದಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಖರ್ಗೆ ಟೀಕಿಸಿದರು.