2026-03-07 05:00:24

Platform is needed to correct financial sharing between Centre and the state | ಕೇಂದ್ರ ರಾಜ್ಯ ನಡುವಿನ ಆರ್ಥಿಕ ಹಂಚಿಕೆಯ ಅಸಮತೋಲನ ಸರಿಪಡಿಸಲು ವೇದಿಕೆ ಬೇಕಿದೆ ಸಿಎಂ ಸಿದ್ದರಾಮಯ್ಯ | Speed News Kannada

Platform is needed to correct financial sharing between Centre and the state | ಕೇಂದ್ರ ರಾಜ್ಯ ನಡುವಿನ ಆರ್ಥಿಕ ಹಂಚಿಕೆಯ ಅಸಮತೋಲನ ಸರಿಪಡಿಸಲು ವೇದಿಕೆ ಬೇಕಿದೆ ಸಿಎಂ ಸಿದ್ದರಾಮಯ್ಯ | Speed News Kannada

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಾಗೂ ಆರ್ಥಿಕ ಹಂಚಿಕೆಯ ಅಸಮತೋಲನ ಸರಿಪಡಿಸಲು ಬಲವಾದ ಸಾಂಸ್ಥಿಕ ವೇದಿಕೆಯೊಂದನ್ನು ರಚಿಸಬೇಕಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಈ ಪತ್ರ ಹಂಚಿಕೊಂಡಿರುವ ಸಿದ್ದರಾಮಯ್ಯ, ‘ಪ್ರಸ್ತುತ ನಿಷ್ಕ್ರಿಯವಾಗಿರುವ ‘ಅಂತರರಾಜ್ಯ ಮಂಡಳಿ’ಯನ್ನು ತಕ್ಷಣ ಪುನರುಜ್ಜೀವನಗೊಳಿಸಿ, ಸಮಾನ ಮನಸ್ಕ ರಾಜ್ಯಗಳು ಒಟ್ಟುಗೂಡಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದ ವಿಭಜನೆ ಮತ್ತು ಸೇರ್ಪಡೆಯ ಅಸ್ಥಿರತೆಯ ನಡುವೆ ನಡೆದ ಸಾಂವಿಧಾನಿಕ ಸಭೆಯಲ್ಲಿ, ಕೇಂದ್ರಕ್ಕೆ ಹೆಚ್ಚು ಅಧಿಕಾರ ಇರುವಂತಹ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ಸೇರಿಸಲಾಯಿತು. ಒಕ್ಕೂಟ ವ್ಯವಸ್ಥೆಯನ್ನು ಕೇವಲ ಆಡಳಿತದ ದೃಷ್ಟಿಯಲ್ಲಿ ರೂಪಿಸಿದ್ದಲ್ಲ, ಇದು ಅಧಿಕಾರದ ಕೇಂದ್ರೀಕರಣದ ವಿರುದ್ಧದ ರಚನಾತ್ಮಕ ರಕ್ಷಣೆಯ ವ್ಯವಸ್ಥೆಯಾಗಿದೆ. ಆದರೆ ಇಂದಿನ ವ್ಯವಸ್ಥೆಯು ದಶಕಗಳಿಂದ ಅಧಿಕಾರದ  ಕೇಂದ್ರೀಕರಣದತ್ತ ಸಾಗುತ್ತಿದೆ.
ಸಂವಿಧಾನದ ಸಮವರ್ತಿ ಪಟ್ಟಿಯ (ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸೇರಿದ ಸಂವಿಧಾನದ ಕೆಲವು ವಿಷಯಗಳು) ವಿವರಣಾತ್ಮಕ ವ್ಯಾಖ್ಯಾನಗಳಿಂದಾಗಿ  ಕೇಂದ್ರ-ರಾಜ್ಯಗಳ ನಡುವಣ ಸಂಬಂಧಗಳ ಸಮತೋಲನ ತಪ್ಪುತ್ತಿದೆ. ಷರತ್ತುಬದ್ಧ ಅನುದಾನ ಹಂಚಿಕೆ, ರಾಜ್ಯಗಳಿಗೆ ತಮ್ಮ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಲು ಅವಕಾಶ ಇಲ್ಲದಂತೆ ವಿನ್ಯಾಸಗೊಳಿಸಿರುವ ಕೇಂದ್ರದ ಯೋಜನೆಗಳ ಹೇರಿಕೆ, ರಾಜ್ಯಪಾಲರ ಅನುಮೋದನೆ ವಿಚಾರದಲ್ಲಿ ತೊಡಕುಗಳ ಕಾರಣಗಳಿಂದಾಗಿ ಒಂದೆಡೆ ರಾಜ್ಯಗಳ ಅಧಿಕಾರ ಕ್ಷೀಣಿಸಿದರೆ, ಇನ್ನೊಂದೆಡೆ ಕೇಂದ್ರದ ಅಧಿಕಾರ ವೃದ್ಧಿಸುತ್ತಿದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಈ ವಿಷಯಗಳ ಮೇಲೆ ಚರ್ಚಿಸಲು ಸಾಂಸ್ಥಿಕ ವೇದಿಕೆಯನ್ನು ಒದಗಿಸುವುದು ಅಗತ್ಯವಾಗಿದೆ. ಅನುಚ್ಛೇದ 263ರ ಅಡಿಯಲ್ಲಿ ಬರುವ ಅಂತರ್-ರಾಜ್ಯ ಮಂಡಳಿಯ ಪುನಶ್ಚೇತನ, ಮುಖ್ಯಮಂತ್ರಿಗಳ ವಿಶೇಷ ಸಭೆ, ಅಥವಾ ಸಾಂವಿಧಾನಿಕ ಆಶಯದಡಿ ಸಂವಿಧಾನವನ್ನು ಪರಿಶೀಲನೆಗೊಳಪಡಿಸಲು ಒಂದು ರಚನಾತ್ಮಕ ವೇದಿಕೆ – ಇವುಗಳಲ್ಲಿ ಯಾವುದಾದರೂ ಒಂದರ ಮೂಲಕ ರಾಜ್ಯಗಳು ತಮ್ಮ ಶಿಫಾರಸುಗಳನ್ನು ಔಪಚಾರಿಕವಾಗಿ, ಪಾರದರ್ಶಕವಾಗಿ ಮತ್ತು ಚರ್ಚಾತ್ಮಕವಾಗಿ ಮಂಡಿಸಬಹುದಾದ ವೇದಿಕೆಯನ್ನು ಒಕ್ಕೂಟವು ಸೃಷ್ಟಿಸಬೇಕು. ಈ ರೀತಿ ರಾಜ್ಯಗಳ ದನಿಗೆ ಕಿವಿಗೊಡದೆ ಇದ್ದರೆ, ಅವುಗಳ ಅಭಿಪ್ರಾಯ ಮಂಡನೆಗೆ ಅವಕಾಶ ಇಲ್ಲದೆ ಹೋದೆ ಸಹಕಾರಿ ಒಕ್ಕೂಟ ವ್ಯವಸ್ಥೆಯು ಕೇವಲ ಹಾಳೆಗಳಿಗೆ ಸೀಮಿತವಾಗಲಿದೆ. 
ಕೇಂದ್ರ-ರಾಜ್ಯಗಳ ಸಂಬಂಧಗಳಲ್ಲಿ ಸಮತೋಲನವನ್ನು ಮರುಸ್ಥಾಪಿಸುವ ಅರ್ಥಪೂರ್ಣ ರಾಷ್ಟ್ರೀಯ ಸಂವಾದವನ್ನು ಮುಂದುವರಿಸಲು ಕರ್ನಾಟಕವು ತಮಿಳುನಾಡು ಹಾಗೂ ಇತರ ರಾಜ್ಯಗಳೊಂದಿಗೆ ರಚನಾತ್ಮಕವಾಗಿ ಸಹಕರಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.