2026-03-07 06:46:44

Pavilion block of Hubballi KSCA stadium | ಹುಬ್ಬಳ್ಳಿ KSCA ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್‌ ಗೆ ಸುನೀಲ್ ಜೋಶಿ ಹೆಸರು ನಾಮಕರಣ | Speed News Kannada

Pavilion block of Hubballi KSCA stadium | ಹುಬ್ಬಳ್ಳಿ KSCA ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್‌ ಗೆ ಸುನೀಲ್ ಜೋಶಿ ಹೆಸರು ನಾಮಕರಣ | Speed News Kannada

ಹುಬ್ಬಳ್ಳಿ: ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ (KSCA) ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್‌ ವೊಂದಕ್ಕೆ ಹಿರಿಯ ಕ್ರಿಕೆಟ್‌ ಆಟಗಾರ ಸುನೀಲ್ ಜೋಶಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಇಂದು ನೂತನ ಪೆವಿಲಿಯನ್ ಬ್ಲಾಕ್ ಅನ್ನು ಉದ್ಘಾಟಿಸಿದರು.
ತಮ್ಮ ಹೆಸರಿನ ನಾಮಫಲಕ ಅನಾವರಣಗೊಳ್ಳುತ್ತಿದ್ದಂತೆ ಸುನೀಲ್ ಜೋಶಿ ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿದರು. ನಂತರ ಮಾತನಾಡಲು ನಿಂತರಾದರೂ ಕೆಲ ಸಮಯ ಮಾತೇ ಹೊರಡಲಿಲ್ಲ.  
ಇಷ್ಟು ದೊಡ್ಡ ಕೀರ್ತಿ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ರಾಷ್ಟ್ರಕವಿ ಕುವೆಂಪು ಅವರು ನಮ್ಮ ಸಾಧನೆ ಯಾರಿಗಾದರೂ ಪ್ರೇರಣೆಯಾಗಬೇಕು ಎಂದು ಹೇಳುತ್ತಿದ್ದರು. ಅಂತಹ ದಿನ ಇಂದು ನನ್ನ ಪಾಲಿಗೆ ಬಂದಿದೆ' ಎಂದು ಹರ್ಷ ವ್ಯಕ್ತಪಡಿಸಿದರು.
ಕ್ರಿಕಟ್‌ ಆಡುತ್ತಿದ್ದ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, ನಾನು 14 ವರ್ಷದ ಹುಡುಗನಾಗಿದ್ದಾಗ ಗದಗದಿಂದ ಹುಬ್ಬಳ್ಳಿಗೆ ಬಂದು ಅಭ್ಯಾಸ ಮಾಡುತ್ತಿದ್ದೆ. ಈ ಮಟ್ಟದ ಶ್ರೇಯಸ್ಸು ಸಿಗುತ್ತದೆ ಎಂದು ನನಗೆ ಆಗ ತಿಳಿದಿರಲಿಲ್ಲ. ಜೀವಮಾನದಲ್ಲಿ ಭಾರತದ ಪರ ಆಡುತ್ತೇನೆಂದೂ ಅಂದುಕೊಂಡಿರಲಿಲ್ಲ ಎಂದರು.
 ಈ ಸಂದರ್ಭದಲ್ಲಿ ನನ್ನ ಕೋಚ್ ದಯಾನಂದ ಶೆಟ್ಟಿ ಹಾಗೂ ಎ.ಕೆ.ಕ್ರಿಕೆಟ್ ಅಕಾಡೆಮಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಜನ್ಮಸ್ಥಳ ಗದಗ ಆದರೂ, ನನ್ನ ಕ್ರಿಕೆಟ್ ಭವಿಷ್ಯವನ್ನು ಕಟ್ಟಿಕೊಟ್ಟಿದ್ದು ಇದೇ ಹುಬ್ಬಳ್ಳಿ. ನನ್ನ ಪರಿಶ್ರಮ ಹಾಗೂ ಈ ಮಣ್ಣಿನ ಗುಣ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ' ಎಂದು ಭಾವುಕರಾಗಿ ಹೇಳಿದರು.
'ಕರ್ನಾಟಕ ಹಾಗೂ ಭಾರತ ತಂಡದಲ್ಲಿ ಆಡಿರುವುದು ನನಗೆ ತೃಪ್ತಿ ತಂದಿದೆ. ಪೋಷಕರು, ಸಹೋದರರು, ಆಯ್ಕೆ ಸಮಿತಿ ಹಾಗೂ ತಮ್ಮ ಪತ್ನಿಯ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ.  ದೇಶಕ್ಕಾಗಿ ಆಡುವಾಗ ಮಗ ಆರ್ಯನ್ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ ಕಾಡುತ್ತಿದೆ ಎಂದರು.
ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಸಂತೋಷ ಮೆನನ್, ಜಂಟಿ ಕಾರ್ಯದರ್ಶಿ ಬಿ.ಕೆ. ರವಿ., ಖಜಾಂಚಿ ಮಧುಕರ, ಉಪಾಧ್ಯಕ್ಷ ಸುಜೀತ ಸೋಮಸುಂದರ, ವೀರಣ್ಣ ಸವಡಿ, ಡಾ.ರವನೀತ ಜೋಶಿ ಸೇರಿದಂತೆ ಮೊದಲಾದವರಿದ್ದರು.‌
ಹುಬ್ಬಳ್ಳಿಯಲ್ಲಿ ರಣಜಿ ಫೈನಲ್: ಇದೇ ಮೊದಲ ಬಾರಿಗೆ ರಣಜಿ ಫೈನಲ್ ಪಂದ್ಯಕ್ಕೆ ಹುಬ್ಬಳ್ಳಿ ಆತಿಥ್ಯ ವಹಿಸುತ್ತಿದೆ. ಇಂದಿನಿಂದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ಮುಖಾಮುಖಿಯಾಗಲಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.