2026-06-08 03:53:45

Parameshwara clarifies | ಕೈಗಾರಿಕೆ ವಿಚಾರಕ್ಕೆ ಕುಮಾರಸ್ವಾಮಿ ಭೇಟಿ ಮಾಡಿದ್ದೆ ಪರಮೇಶ್ವರ್‌ ಸ್ಪಷ್ಟನೆ | Speed News Kannada

 Parameshwara clarifies | ಕೈಗಾರಿಕೆ ವಿಚಾರಕ್ಕೆ ಕುಮಾರಸ್ವಾಮಿ ಭೇಟಿ ಮಾಡಿದ್ದೆ ಪರಮೇಶ್ವರ್‌ ಸ್ಪಷ್ಟನೆ | Speed News Kannada

ಬೆಂಗಳೂರು: ಕೇಂದ್ರ ಕೈಗಾರಿಕಾ ಸಚಿವ ಹೆಚ್. ಡಿ. ಕುಮಾರಸ್ವಾಮಿಯನ್ನು ರಾಜಕೀಯ ಕಾರಣಕ್ಕೆ ಭೇಟಿ ಮಾಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ‌ ಕುಮಾರಸ್ವಾಮಿಯವರನ್ನು ‌ಭೇಟಿಯಾದ ವಿಚಾರವಾಗಿ ಇಂದು ಪ್ರತಿಕ್ರಿಯಿಸಿದ ಅವರು, ರಾಜಕೀಯ ಕಾರಣಗಳಿಗೆ ಭೇಟಿ ಮಾಡಿಲ್ಲ. ಕೈಗಾರಿಕೆ ಸಂಬಂಧ ಒಂದು ವಿಚಾರವಿದ್ದು, ಅದಕ್ಕಾಗಿ ಭೇಟಿ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು. 
ನಾವು ಹಿಂದೆ ಒಟ್ಟಾಗಿ ಸರ್ಕಾರ ನಡೆಸಿದ್ದೇವೆ. ಭೇಟಿ ಆಗಿರೋದೇ ತಪ್ಪು ಅನ್ನೋದು ಸರಿಯಲ್ಲ. ರಾಜಕೀಯ ಕಾರಣಕ್ಕಂತೂ ಅವರನ್ನು ಭೇಟಿ ಮಾಡಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲೂ ನಮ್ಮ ಸಿದ್ಧಾಂತ ನಾವು ಕಾಪಾಡಿಕೊಂಡರೆ ಅವರ ಸಿದ್ಧಾಂತವನ್ನು ಅವರು ಕಾಪಾಡಿಕೊಂಡರು ಎಂದರು.
ಕಳೆದ ವಾರ ಬೆಂಗಳೂರಿನ ಖಾಸಗಿ ಸ್ಥಳದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಜಿ. ಪರಮೇಶ್ವರ್ ಭೇಟಿಯಾಗಿದ್ದರು. ಈ ಭೇಟಿ ಸಾಕಷ್ಟು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತ್ತು. ಅಧಿಕಾರ ಹಸ್ತಾಂತರ ಮತ್ತು ದಲಿತ ಮುಖ್ಯಮಂತ್ರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇಬ್ಬರೂ ಮುಖಂಡರು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.
ಸಚಿವ ಸ್ಥಾನಕ್ಕಾಗಿ ಮೊದಲ ಬಾರಿ ಗೆದ್ದ ಶಾಸಕರು ಬೇಡಿಕೆ ಮಂಡಿಸಿರುವುದು ತಪ್ಪಲ್ಲ. ಅವರನ್ನು ಸಂಪುಟಕ್ಕೆ ತಗೊಳ್ಳೋದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟದ್ದು. ಅವರ ಬೇಡಿಕೆ ಸರಿಯಾಗಿದೆ. ಆದ್ರೆ ಹೈಕಮಾಂಡ್ ಯಾವ ರೀತಿ ಸ್ವೀಕರಿಸುತ್ತೆ ಅಂತ ನೋಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮಲ್ಲಿ ಗೆದ್ದವರೆಲ್ಲ ಮಂತ್ರಿ ಆಗಲು ಅರ್ಹರಿದ್ದಾರೆ. ಆದ್ರೆ 33 ಮಂದಿಗೆ ಮಾತ್ರ ಸಚಿವರಾಗಲು ಅವಕಾಶ ಇದೆ. ಹೊಸಬರೂ ಇರಬೇಕು, ಹಳಬರೂ ಬೇಕು. ಪುನಾರಚನೆ ಆಗುತ್ತೋ, ನಾಯಕತ್ವ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಏನೋ ಒಂದು ವಿದ್ಯಮಾನ ಅಂತೂ ಆಗುತ್ತದೆ ಎಂದರು.
ದಲಿತ ಸಿಎಂ ಚರ್ಚೆ ಆಗಬೇಕು. ಇನ್ನೂ ಹೆಚ್ಚು ಚರ್ಚೆ ಆಗಲಿ. ಅದರಲ್ಲಿ ನನಗೇನೂ ತಪ್ಪು ಕಾಣ್ತಿಲ್ಲ. ಆದ್ರೆ ತೀರ್ಮಾನ ಮಾಡೋದು ಹೈಕಮಾಂಡ್ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.