2026-04-23 06:11:13

Pahalgam attack and Pakistans cunning|ಪಹಲ್ಗಾಮ್ ದಾಳಿ ಮತ್ತು ಪಾಕಿಸ್ತಾನದ ಕುತಂತ್ರ|Speed News Kannada

Pahalgam attack and Pakistans cunning|ಪಹಲ್ಗಾಮ್ ದಾಳಿ ಮತ್ತು ಪಾಕಿಸ್ತಾನದ ಕುತಂತ್ರ|Speed News Kannada

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಲಾಭ ತಂದುಕೊಟ್ಟಿದೆ ಎಂದು ಲಷ್ಕರ್-ಎ-ತೈಬಾ ಕಮಾಂಡರ್ ಅಬು ಮೂಸಾ ಕಾಶ್ಮೀರಿ ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಲು ಈ ದಾಳಿಯು ಪಾಕಿಸ್ತಾನಕ್ಕೆ ಒಂದು ಅವಕಾಶ ಮಾಡಿಕೊಟ್ಟಿದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ಸ್ಫೋಟಕ ಹೇಳಿಕೆಯು ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳ ಹಿಂದೆ ಪಾಕಿಸ್ತಾನದ ನೇರ ಕೈವಾಡ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಅಮಾಯಕರ ರಕ್ತಪಾತವನ್ನು ಪಾಕಿಸ್ತಾನವು ತನ್ನ ರಾಜತಾಂತ್ರಿಕ ದಾಳವಾಗಿ ಬಳಸಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ನರಮೇಧ ನಡೆಸಿದ್ದರು. ಈ ಹೇಯ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಹೊಂಚು ಹಾಕುತ್ತಿದ್ದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ಶ್ರೀನಗರದ ದಚಿಗಮ್ ಅರಣ್ಯ ಪ್ರದೇಶದಲ್ಲಿ ನಡೆಸಿದ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯ ಮೂಲಕ ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಯಿತು. ಭಾರತೀಯ ಸೇನೆಯ ಈ ದಿಟ್ಟ ಕಾರ್ಯಾಚರಣೆಯು ಉಗ್ರರ ಅಟ್ಟಹಾಸಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಂಡಂತಾಗಿದೆ.

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಾಗತಿಕ ವೇದಿಕೆಗಳಲ್ಲಿ ಬಿಂಬಿಸಿಕೊಳ್ಳುವ ಪಾಕಿಸ್ತಾನ, ವಾಸ್ತವದಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ ಎಂಬುದು ಈ ಬೆಳವಣಿಗೆಯಿಂದ ಬಹಿರಂಗವಾಗಿದೆ. 'ಆಪರೇಷನ್ ಸಿಂಧೂರ' ಮೂಲಕ ಈಗಾಗಲೇ ಪಾಕಿಸ್ತಾನದ ಮುಖವಾಡವನ್ನು ಕಳಚಿದ್ದ ಭಾರತಕ್ಕೆ, ಇದೀಗ ಲಷ್ಕರ್ ಕಮಾಂಡರ್‌ನ ಹೇಳಿಕೆಯು ಮತ್ತೊಂದು ಬಲವಾದ ಸಾಕ್ಷ್ಯವನ್ನು ಒದಗಿಸಿದೆ. ಅಮೆರಿಕ-ಇರಾನ್ ಮಾತುಕತೆಯ ನಡುವೆ ಪಾಕಿಸ್ತಾನವು ತನ್ನ ಬಂಡವಾಳವನ್ನು ತಾನೇ ಬಯಲು ಮಾಡಿಕೊಂಡಂತಾಗಿದ್ದು, ವಿಶ್ವದ ಮುಂದೆ ಅದರ ಅಸಲಿ ಬಣ್ಣ ಬಯಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.