2026-03-07 05:18:15

Opposition leader Ashok demands Rs 15 thousand crore | ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ರೂ 15 ಸಾವಿರ ಕೋಟಿ ನೀಡಿ ವಿಪಕ್ಷ ನಾಯಕ ಅಶೋಕ್‌ ಆಗ್ರಹ | Speed News Kannada

Opposition leader Ashok demands Rs 15 thousand crore | ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ರೂ 15 ಸಾವಿರ ಕೋಟಿ ನೀಡಿ ವಿಪಕ್ಷ ನಾಯಕ ಅಶೋಕ್‌ ಆಗ್ರಹ | Speed News Kannada

 ಬೆಂಗಳೂರು:  ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್‌ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಹೆಚ್ಚು ಅವಧಿಗೆ  ಅಧಿಕಾರ ನಡೆಸಿದ್ದು ಕಾಂಗ್ರೆಸ್‌.  ಅತಿ ಹೆಚ್ಚು ಬಜೆಟ್‌ ಮಂಡಿಸಿರುವುದು ಸಿದ್ದರಾಮಯ್ಯ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಈಗ ಆ ತಪ್ಪನ್ನು ಸರಿಪಡಿಸಲು ಬಜೆಟ್‌ನಲ್ಲಿ ಸೂಕ್ತ ಅನುದಾನ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಅನ್ಯ ಇಲಾಖೆಗಳಿಗೆ ನೀಡುವ ಅನುದಾನವನ್ನು ಕ್ರೊಢೀಕರಿಸಿ ಅನುದಾನ ನೀಡಿರುವುದಾಗಿ ಹಾರಿಕೆ ಭರವಸೆ ನೀಡಬಾರದು. ಕೆಕೆಆರ್‌ಡಿಬಿ ಸಹಿತ ಇತರೆ ಅಭಿವೃದ್ಧಿ ಮಂಡಳಿ ಅಥವಾ ನಿಗಮಗಳಿಗೆ ನೀಡುವ ಅನುದಾನವನ್ನು ಈ ಲೆಕ್ಕಾಚಾರಕ್ಕೆ ಸೇರಿಸಬಾರದು. ತಾರತಮ್ಯ ನಿವಾರಣೆಗಾಗಿಯೇ ವಿಶೇಷ, ಪ್ರತ್ಯೇಕ ಅನುದಾನ ಒದಗಿಸಬೇಕು. ಇಲ್ಲವಾದರೆ ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.
ತಾರತಮ್ಯ ನಿವಾರಣೆ ನಿಗಾ ಘಟಕ ಸ್ಥಾಪಿಸಿ 
 ಪ್ರೊ. ಡಿ.ಎಂ. ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಶೇ. 65 ರಿಂದ ಶೇ.72.8ಕ್ಕೆ ಹೆಚ್ಚಳ ಆಗಿರುವುದು ಆತಂಕಕಾರಿ ಬೆಳವಣಿಗೆ. ದೇಶದ ದೊಡ್ಡ ರಾಜ್ಯಗಳ ಪೈಕಿ ನಿವ್ವಳ ದೇಶಿಯ ಉತ್ಪನ್ನ (ಎನ್‌ಎಸ್‌ಡಿಪಿ)ದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ಪ್ರಾದೇಶಿಕ ಅಸಮತೋಲನಕ್ಕೆo ಕಾರಣಗಳ ಬಗ್ಗೆಯೂ ಮಾತನಾಡಬೇಕು. ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಪ್ರೊ. ಗೋವಿಂದರಾವ್‌ ಸಮಿತಿ ನೀಡಿರುವ 11 ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಟಾನಕ್ಕೆ “ಪ್ರಾದೇಶಿಕ ತಾರತಮ್ಯ ನಿವಾರಣೆ ನಿಗಾ ಘಟಕ” ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. 
 ಕೆಕೆಆರ್‌ಡಿಬಿ ಪುನಾರಚನೆ ಅಗತ್ಯ 
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯ ಸ್ವರೂಪ ಬದಲಾಗಬೇಕು ಎಂಬುದು ಆ ಭಾಗದ ಜನತೆ ಆಶಯವಾಗಿದೆ. ಚುನಾಯಿತ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಯೋಜನೆ ರೂಪಿಸುವ ಪದ್ಧತಿ ಬದಲಾಗಬೇಕು. ತಜ್ಞರ ಸಲಹೆಯಂತೆ ಹೊಸದಾಗಿ ಮಾರ್ಗಸೂಚಿ ರೂಪಿಸಿ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಗೊಳಿಸಿ, ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಬೇಕು. ಇದಕ್ಕಾಗಿ ಪ್ಲಾನಿಂಗ್‌ ಇಲಾಖೆಯ ಕಾರ್ಯಚಟುವಟಿಕೆಗಳ ಸ್ವರೂಪ ಬದಲಾಗಬೇಕು ಎಂಬ ಗೋವಿಂದರಾವ್‌ ಸಮಿತಿ ಅಭಿಪ್ರಾಯವನ್ನು ಆದ್ಯತೆ ಮೇರೆಗೆ ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.