ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು ಹೊಸ ಅಧ್ಯಕ್ಷರ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಬೆಂಗಳೂರಿಗೆ ಬಂದಿದ್ದಾರೆ. ಅವರು ಇಂದು ಇಡೀ ದಿನ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ಪಕ್ಷದ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ಸಲ್ಲಿಸಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಬಿ ವೈ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲು ಪಕ್ಷ ಇಂಗಿತ ಹೊಂದಿದೆ ಎಂದು ತಿಳಿದು ಬಂದಿದೆ.
ಶಿವಪ್ರಕಾಶ್ ಅವರು ಪಕ್ಷದ ಪ್ರಮುಖ ನಾಯಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಂತರ ಪ್ರಮುಖರ ಸಮಿತಿಯ ಅಭಿಪ್ರಾಯವನ್ನೂ ಕ್ರೋಢೀಕರಿಸಲಿದ್ದಾರೆ. ಇದೇ 23 ರಂದು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅದಕ್ಕೂ ಮುನ್ನವೇ ವರದಿ ನಿತಿನ್ ಅವರ ಕೈ ಸೇರಲಿದೆ.
ಅಧ್ಯಕ್ಷರ ಆಯ್ಕೆ ಜತೆಗೆ 2028ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧವೂ ಶಿವಪ್ರಕಾಶ್ ಮಾರ್ಗದರ್ಶನ ಮಾಡಲಿದ್ದಾರೆ.ಬಹುತೇಕ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ್ದು, ಕರ್ನಾಟಕದಲ್ಲಿ ಮಾತ್ರ ಬಾಕಿ ಇದೆ. ಶಿವಪ್ರಕಾಶ್ ಅವರು ಆರ್‌ಎಸ್‌ಎಸ್ ಮೂಲದವರಾಗಿದ್ದು, ಸಂಘದ ಪ್ರಮುಖರ ಅಭಿಪ್ರಾಯವನ್ನೂ ಆಲಿಸಲಿದ್ದಾರೆ.
ಮುಖಂಡರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳಬಹುದಾಗಿದೆ. ಬಿ.ವೈ.ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಗಳಿದ್ದರೂ ಎಲ್ಲರೂ ಅವರನ್ನೇ ಮುಂದುವರಿಸಬೇಕು ಎಂದು ಹೇಳುತ್ತಾರೆ ಎಂದು ಹೇಳುವಂತಿಲ್ಲ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಸಾಧನೆ ಗಮನಾರ್ಹವಾಗಿಲ್ಲ. ಯಾವುದೇ ಚುನಾವಣೆಯನ್ನೂ ಗೆದ್ದಿಲ್ಲ. ಹಾಗಾಗಿ ಭಿನ್ನಭಿಪ್ರಾಯಗಳು ಮೂಡುವುದು ಸಹಜ ಎಂದು ಪಕ್ಷದ ಮೂಲಗಳು ಹೇಳುತ್ತವೆ.