ತುಮಕೂರು: ಜಿಲ್ಲೆಯ ಮಧುಗಿರಿ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಸರ್ಕಾರವು ರೈತರಿಗೆ ಪ್ರತಿ ಕೆಜಿ ರಾಗಿಗೆ 48.80 ರೂ. ಬೆಂಬಲ ಬೆಲೆ ಘೋಷಿಸಿ ನೇರವಾಗಿ ಖಾತೆಗೆ ಹಣ ಜಮಾ ಮಾಡುತ್ತಿದ್ದರೂ, ಅಧಿಕಾರಿಗಳೂ ತೂಕದಲ್ಲಿ ಅಕ್ರಮ ನಡೆಸಿ ರೈತರಿಂದ ಹೆಚ್ಚುವರಿ ರಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ. ನಿಯಮ ಪ್ರಕಾರ ಒಂದು ಚೀಲ ರಾಗಿಗೆ 50.2 ಕೆಜಿ ಮಾತ್ರ ತೂಕ ಇರಬೇಕಾದರೂ, ಕೇಂದ್ರದಲ್ಲಿ 52.2 ಕೆಜಿ ತೂಕದಂತೆ ಸ್ವೀಕರಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ. ಇದರಿಂದ ಪ್ರತಿ ಚೀಲಕ್ಕೆ ಕನಿಷ್ಠ 2 ಕೆಜಿ ಹೆಚ್ಚುವರಿ ರಾಗಿ ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರೈತರ ಪರವಾಗಿ ವೀರೇಂದ್ರ ಮಾತನಾಡಿ, ಒಂದು ಚೀಲಕ್ಕೆ 2 ಕೆಜಿ ಹೆಚ್ಚುವರಿ ರಾಗಿ ಪಡೆಯುತ್ತಿರುವುದು ರೈತರ ಹೊಟ್ಟೆ ಮೇಲೆ ಹೊಡೆಯುವಂತಾಗಿದೆ. ಒಟ್ಟಾರೆ 18,500 ಕ್ವಿಂಟಾಲ್ ರಾಗಿಯಲ್ಲಿ ಸುಮಾರು 46 ರಿಂದ 47 ಸಾವಿರ ಕೆಜಿ ಹೆಚ್ಚುವರಿ ರಾಗಿ ಸಂಗ್ರಹವಾಗಲಿದೆ. ಇದರ ಮೌಲ್ಯವೇ ಸುಮಾರು 18 ರಿಂದ 20 ಲಕ್ಷ ರೂ.ವಾಗುತ್ತದೆ. ಈ ಹಣವನ್ನು ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಗಿ ಖರೀದಿ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಎಂದು ಮನವಿ ಮಾಡಿದರು.