2026-03-07 05:06:47

NWKRTC to be renamed Kittur Channamma | ಎನ್‌ಡಬ್ಲ್ಯುಕೆಆರ್‌ಟಿಸಿಗೆ ಕಿತ್ತೂರು ಚನ್ನಮ್ಮ ಎಂದು ಮರುನಾಮಕರಣ ರಾಮಲಿಂಗಾರೆಡ್ಡಿ | Speed News Kannada

NWKRTC to be renamed Kittur Channamma | ಎನ್‌ಡಬ್ಲ್ಯುಕೆಆರ್‌ಟಿಸಿಗೆ ಕಿತ್ತೂರು ಚನ್ನಮ್ಮ ಎಂದು ಮರುನಾಮಕರಣ ರಾಮಲಿಂಗಾರೆಡ್ಡಿ | Speed News Kannada

ಬೆಳಗಾವಿ: ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ(ಎನ್‌ಡಬ್ಲ್ಯುಕೆಆರ್‌ಟಿಸಿ) ‘ಕಿತ್ತೂರು ಚನ್ನಮ್ಮ ರಸ್ತೆ ಸಾರಿಗೆ ನಿಗಮ’ ಎಂದು ಮರುನಾಮಕರಣ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇಂದು ನಡೆದ ಎನ್‌ಡಬ್ಲ್ಯುಕೆಆರ್‌ಟಿಸಿ 28ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹೊಸ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎನ್‌ಡಬ್ಲ್ಯುಕೆಆರ್‌ಟಿಸಿಗೆ ಕಿತ್ತೂರು ಚನ್ನಮ್ಮನ ಹೆಸರು ಮರುನಾಮಕರಣ ಮಾಡುವ ಸಂಬಂಧ ಪ್ರಸ್ತಾವ ಸಲ್ಲಿಕೆಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಮರುನಾಮಕರಣ ಮಾಡುತ್ತೇವೆ ಎಂದರು.
ಈ ಹಿಂದೆ ಅಧಿಕಾರದಲ್ಲಿದ್ದ  ಬಿಜೆಪಿ ಸರ್ಕಾರ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಕೋವಿಡ್‌–19 ಹಿನ್ನೆಲೆಯಲ್ಲಿ ಆಗ ಸಿಬ್ಬಂದಿ ವೇತನ ನೀಡಲು, ಡೀಸೆಲ್‌ ಖರೀದಿಗೂ ಕಷ್ಟದ ಪರಿಸ್ಥಿತಿ ಇತ್ತು. ಹಾಗಾಗಿ ಈಗ ಕೆಲವು ಮಾರ್ಗಗಳಲ್ಲಿ ಹಳೇ ಬಸ್‌ಗಳು ಓಡುತ್ತಿವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ರಾಜ್ಯಾದ್ಯಂತ  ಹೊಸ ಬಸ್‌ ಒದಗಿಸಲಾಗುತ್ತಿದೆ ಎಂದರು.
ಬೆಳಗಾವಿಗೆ 100 ಎಲೆಕ್ಟ್ರಿಕಲ್‌ ಬಸ್‌ ಮಂಜೂರಾಗಿವೆ. ಕೇಂದ್ರದ ಟೆಂಡರ್‌ ಪ್ರಕ್ರಿಯೆ ಆಗುವುದಷ್ಟೇ ಬಾಕಿ ಇದೆ. ಇದಲ್ಲದೆ, ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಬಸ್‌ ಒದಗಿಸಲಾಗುವುದು. ಬೇಡಿಕೆ ಇರುವ ಮಾರ್ಗಗಳಲ್ಲಿ ಬಸ್‌ ಕಾರ್ಯಾಚರಣೆ ಆರಂಭಿಸಲಾಗುವುದು. ಈ ಬಾರಿ ಸಾರಿಗೆ ಸಚಿವನಾದ ನಂತರ ಸಾರಿಗೆ ಸಂಸ್ಥೆಯಲ್ಲಿ 9 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ. ಅನುಕಂಪದ ಆಧಾರದಲ್ಲಿ 1 ಸಾವಿರ ಮಂದಿಗೆ ಕೆಲಸ ಕೊಟ್ಟಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ , ಎನ್‌ಡಬ್ಲ್ಯುಕೆಆರ್‌ಟಿಸಿಗೆ 250 ಹೊಸ ಬಸ್‌ ನೀಡಿದ್ದು, ಬಹುದಿನಗಳ ಕನಸು ಈಡೇರಿದೆ. ಬೆಳಗಾವಿ ರಾಜ್ಯದಲ್ಲೇ ದೊಡ್ಡ ಜಿಲ್ಲೆ. ಮುಂದಿನ ದಿನಗಳಲ್ಲಿ ನಮಗೆ ಹೆಚ್ಚಿನ ಬಸ್‌ ಒದಗಿಸಬೇಕು ಎಂದು ಮನವಿ ಮಾಡಿದರು.
ಅಪಘಾತ ರಹಿತವಾಗಿ ಸೇವೆ ಸಲ್ಲಿಸಿದ 68 ಚಾಲಕರಿಗೆ ಬೆಳ್ಳಿ‌ ಪದಕ, ಹೊಸದಾಗಿ ನೇಮಕಗೊಂಡ 188 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. 
ಶಾಸಕ ಆಸಿಫ್ ಸೇಠ್ ಮಾತನಾಡಿ, ‘ಬೆಳಗಾವಿಗೆ 100 ಎಲೆಕ್ಟ್ರಿಕಲ್‌ ಬಸ್‌ ಬರುತ್ತಿವೆ ಎಂದು ಆರು ತಿಂಗಳಿನಿಂದ ಹೇಳಲಾಗುತ್ತಿದೆ. ಆದರೆ, ಅವು ಬರುತ್ತಿಲ್ಲ. ಇದರಿಂದ ಶಾಲಾ–ಕಾಲೇಜಿಗೆ ಹೋಗಲು ಮಕ್ಕಳಿಗೆ ತೊಂದರೆಯಾಗುತ್ತಿದೆ. ಬೆಳಗಾವಿಗೆ ಎರಡನೇ ರಾಜಧಾನಿ ಎನ್ನುತ್ತಾರೆ. ಅದಕ್ಕೆ ತಕ್ಕಂತೆ ಬಸ್‌ ಸೌಕರ್ಯ ಕಲ್ಪಿಸುತ್ತಿಲ್ಲ ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ, ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜಕಲ್ಯಾಣ, ಇಂಧನ ಮತ್ತಿತರ ಖಾತೆಗಳ ಸಚಿವರು ದಕ್ಷಿಣ ಕರ್ನಾಟಕದವರೇ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.