ಭಟ್ಕಳ: ತಾಲ್ಲೂಕಿನ ಶಿರಾಲಿಯ ತಟ್ಟಿಹಕ್ಕಲ ಕಳಿನಕಟ್ಟೆ ನದಿಯಲ್ಲಿ ಚಿಪ್ಪಿಕಲ್ಲು ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ ಪಡುಶಿರಾಲಿ ನಿವಾಸಿ ಮಾದೇವ ಜಟ್ಟಪ್ಪ ನಾಯ್ಕ (52) ಮೃತದೇಹ ಪತ್ತೆಯಾಗಿದೆ.
ಇವರ ದೇಹ ಮುಳುಗಿದ ಸ್ಥಳದಿಂದ ಸ್ವಲ್ಪದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳಿನಟ್ಟಿ ನದಿಯಲ್ಲಿ ಚಿಪ್ಪಿಕಲ್ಲು ಆರಿಸಲು ಶಾರದಾಹೊಳೆ ಗ್ರಾಮದ 14 ಮಂದಿ ತೆರಳಿದ್ದರು.ಇವರಲ್ಲಿ ಮೂವರು ಮಾತ್ರ ಬದುಕುಳಿದಿದ್ದಾರೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ಸಂಬಂಧಿಕರು. ಕಪ್ಪೆಚಿಪ್ಪು ಆರಿಸಲು ತೆರಳಿದ್ದಾಗ ನೀರಿನ ಹರಿವು ಕಡಿಮೆ ಇತ್ತು. ಆಗ ಇವರೆಲ್ಲರೂ ನದಿ ಮಧ್ಯಕ್ಕೆ ಸಾಗಿದಾಗ ಸಮುದ್ರದ ಉಬ್ಬರದಿಂದ ನೀರು ಒಳ ನುಗ್ಗಿದೆ. ನೀರಿನ ಮಟ್ಟ ಏಕಾಏಕಿ ಹೆಚ್ಚಳವಾಗಿ, ಎಲ್ಲರೂ ಮುಳುಗಿದ್ದಾರೆ. ಮೃತರಿಗೆ ಈಜು ಬರುತ್ತಿರಲಿಲ್ಲ. ಹೂಳು ಹೆಚ್ಚಿದ್ದರಿಂದ ಅವರೆಲ್ಲರೂ ಮುಳುಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದ್ದಾರೆ.
ಘಟನಾ ಸ್ಥಳದಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿಯೇ ಅರಬ್ಬಿ ಸಮುದ್ರ ಇದ್ದು, ಉಬ್ಬರದ ಸಮಯದಲ್ಲಿ ಅಲ್ಲಿಂದ ನೀರು ನದಿಗೆ ಬಂದಿದೆ. ಕಪ್ಪೆ ಚಿಪ್ಪು ಆರಿಸಲು ನದಿಗೆ ಇಳಿದಿದ್ದವರು ಪಾರಾಗಲು ಪರಸ್ಪರ ಕೈ ಹಿಡಿದು ಸಾಗಿದ್ದು, ಗಾಬರಿಯಾಗಿ ಪರಸ್ಪರ ಕೈಹಿಡಿದುಕೊಂಡು ಎಳೆದುಕೊಂಡಿದ್ದರಿಂದ ನಿಯಂತ್ರಣ ತಪ್ಪಿ ಮುಳುಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಮೃತಪಟ್ಟವರೆಲ್ಲರೂ ಕೂಲಿ ಕಾರ್ಮಿಕರು. ಕಪ್ಪೆ ಚಿಪ್ಪು (ಕಳಿನಟ್ಟಿ) ಹೇರಳವಾಗಿ ಸಿಗುವ ಕಾರಣಕ್ಕೆ ಈ ನದಿಗೆ 7 ಕಿ.ಮೀ ದೂರದ ಶಾರದಾಹೊಳೆ ಗ್ರಾಮದಿಂದ ಕಪ್ಪೆಚಿಪ್ಪು ಆರಿಸಲು ಬಂದಿದ್ದರು. ಈ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಶಾಸಕರು, ಕೇಂದ್ರ ಸಚಿವರು ಶೋಕ ವ್ಯಕ್ತಪಡಿಸಿದ್ದಾರೆ. ತೀವ್ರ ಶೋಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.