ಬೆಂಗಳೂರು: ಸ್ವಯಂಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ. ಹೈಕಮಾಂಡ್ ಸೂಚಿಸಿದಾಗ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ನಿನ್ನೆ ಹೈಕಮಾಂಡ್ ನವರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು. ಆ ಪ್ರಕಾರ ರಾಜೀನಾಮೆ ನೀಡಿದ್ದೇನೆ. ರಾಜ್ಯಪಾಲರು ಬೆಂಗಳೂರಿಗೆ ಬಂದ ನಂತರ ನನ್ನ ರಾಜೀನಾಮೆ ಅಂಗೀಕರಿಸಲಿದ್ದಾರೆ ಎಂದು ಹೇಳಿದರು.ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ ಎಂದರು. ನನ್ನ ರಾಜೀನಾಮೆ ಸಂವಿಧಾನಬದ್ಧವಾಗಿದೆ ಎಂದು ಭಾವಿಸುತ್ತೇನೆ. ವರನಟ ರಾಜ್ ಕುಮಾರ್ ಅಭಿಮಾನಿ ದೇವರು ಅಂತಿದ್ರು. ನಾನು ರಾಜಕಾರಣಿ. ಸಂವಿಧಾನವೇ ಧರ್ಮ ಎನ್ನುವವನು. ಮತದಾರರು ನಮ್ಮ ಅಭಿಮಾನಿ ದೇವರು ಎಂದರು.
ತಲಾ ಆದಾಯದಲ್ಲಿ ಕರ್ನಾಟಕ ನಂಬರ್ 1 ಇದೆ. ಜಿಎಸ್ ಟಿ ಸಂಗ್ರಹದಲ್ಲಿ ನಂಬರ್ 2 ಸ್ಥಾನದಲ್ಲಿದೆ. 26-27ನೇ ಸಾಲಿನಲ್ಲಿ ದೇಶದ ಜಿಎಸ್ ಟಿ ಶೇ. 7.4ರಷ್ಟಿದೆ. ಈ ಬಾರಿ ಕರ್ನಾಟಕದ ಜಿಎಸ್ ಟಿ ಶೇ 8.1 ರಷ್ಟಿದೆ. ಕರ್ನಾಟಕ ಸರ್ಕಾರ ಸಾಲ ಮಾಡಿದೆ ಎನ್ನುವುದು ಸುಳ್ಳು. 15ನೇ ಹಣಕಾಸಿನ ಆಯೋಗದಂತೆ ರಾಜ್ಯಕ್ಕೆ ಅನುದಾನ ನೀಡಿಲ್ಲ. ರೂ.5,495 ಕೋಟಿ ಹಣ ಕೇಂದ್ರದಿಂದ ಬಂದಿಲ್ಲ. ಬೆಂಗಳೂರಿನ ಅಭಿವೃದ್ದಿಗೆ ರೂ.11,495 ಕೋಟಿ ಹಣ ಕೊಟ್ಟಿಲ್ಲ. ಭದ್ರಾ ಮೇಲ್ಡಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಬಜೆಟ್ ನಲ್ಲಿ ಘೋಷಣೆ ಮಾಡಿದ್ದರೂ ಭದ್ರಾ ಮೇಲ್ಡಂಡೆಗೆ ರೂ. 5,300 ಕೋಟಿ ಅನುದಾನ ಕೊಡಲಿಲ್ಲ ಎಂದು ಆಪಾದಿಸಿದರು.
ನಾನು ಅಧಿಕಾರ, ಹಣದ ಹಿಂದೆ ಹೋದವನಲ್ಲ. ಆಸ್ತಿಪಾಸ್ತಿ ಮಾಡಬೇಕೆಂದು ರಾಜಕಾರಣಕ್ಕೆ ಬಂದಿಲ್ಲ. ಮತದಾರರು ಅಧಿಕಾರ ಕೊಟ್ಟಾಗ ಸೇವೆ ಮಾಡಿದ್ದೇನೆ. 50 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ. ನಾನು ನಂಬಿದ ಮೌಲ್ಯಗಳು ಮತ್ತು ಸಿದ್ಧಾಂತಗಳ ಜೊತೆ ರಾಜೀ ಮಾಡಿಕೊಂಡಿಲ್ಲ. ಬಡವರಿಗೆ ಅನ್ನ, ಆರೋಗ್ಯ, ಶಿಕ್ಷಣ, ವಸತಿ ನೀಡಿದ್ದೇನೆ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜೀ ಮಾಡಿಕೊಂಡಿಲ್ಲ ಎಂದು ವಿವರಿಸಿದರು.
ಜಾತಿ,ದುಡ್ಡು ಮತ್ತು ತೋಳ್ಭಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆ.
ನಾನು ಮಾತ್ರವಲ್ಲ ನನ್ನ ಕುಟುಂಬ ಕೂಡಾ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ, ನನ್ನ ರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡು ಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಇವೆಲ್ಲವನ್ನೂ ಅನುಭವಿಸಿದಾಗ ರಾಜಕೀಯ ಸನ್ಯಾಸ ತೆಗೆದುಕೊಂಡು ಬಿಡುವ ಎನ್ನುವಷ್ಟು ಮನಸ್ಸು ನೊಂದಿತ್ತು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ, ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ದ ನ್ಯಾಯದ ಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ.
ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ ಎಂದರು.