ಬೆಂಗಳೂರು: ರಾಜ್ಯ ಆಢಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಾಹೀರಾತಿನ ವಾಕ್ಸಮರ ನಿಲ್ಲುವ ಹಾಗಿಲ್ಲ. ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ, ಬಿಜೆಪಿ ಜಾಹೀರಾತಿಗೆ ಮಾಖಗ್ರೆಸ್ ಮುಖಂಡರು ಟೀಕಾಸ್ತ್ರಗಳನ್ನೇ ಬಿಡುತ್ತಿದ್ದಾರೆ.
ಇಂದು ಬಿಜೆಪಿ ನೀಡಿರುವ ಜಾಹೀರಾತಿಗೆ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸತ್ಯ, ಅಹಿಂಸೆ, ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಗಾಂಧೀಯನ್ನು ಅವಮಾನಿಸುವ, ಹೀಯಾಳಿಸುವ ಹೀನ ಮನಸ್ಥಿಯನ್ನೇ ಇಂದು ಪತ್ರಿಕೆಗಳ ಮೂಲಕ ಜಾಹೀರಾತುಗಳಲ್ಲಿ @BJP4Karnataka ಪ್ರಕಟಿಸಿದೆ.
ಕ್ರೌರ್ಯ, ಕೊಲೆ, ಹಿಂಸೆ, ದೌರ್ಜನ್ಯ, ಗೂಂಡಾಗಿರಿಯನ್ನೇ ಬದುಕನ್ನಾಗಿಸಿಕೊಂಡಿರುವ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷ ಗಾಂಧಿ ಅವರ ಊರುಗೋಲನ್ನು ಮುಖ್ಯಮಂತ್ರಿ @siddaramaiah, ಲೋಕಸಭೆ ವಿಪಕ್ಷ ನಾಯಕ @RahulGandhi, ಎಐಸಿಸಿ ಅಧ್ಯಕ್ಷರಾದ @kharge ಅವರನ್ನು ಹೊಡೆಯಲು ಹೋಗುವಂತೆ ಚಿತ್ರಿಸುವ ಜಾಹೀರಾತು ನೀಡುವ ಮೂಲಕ ಗಾಂಧಿಯವರ ಅಹಿಂಸಾ ತತ್ವವನ್ನೇ ಅವಮಾನಿಸಿದೆ.
ಆರ್ ಎಸ್ ಎಸ್ ಬಳಸುವ ಲಾಠಿ ಹಿಂಸೆಯ ಸೂಚಕ, ಗಾಂಧಿ ಬಳಸಿದ ಊರುಗೋಲು ಕೇವಲ ಆಸರೆಯಲ್ಲ, ಬದಲಾಗಿ ಬಲ, ಪರಿಶ್ರಮ ಮತ್ತು ಛಲದ ಸಂಕೇತವಾಗಿತ್ತು. ಗಾಂಧಿಯವರ ತತ್ವಾದರ್ಶಗಳ ಮೇಲೆ ಬಿಜೆಪಿ ಮತ್ತು ಸಂಘಪರಿವಾರ ನಿರಂತರ ದಾಳಿ ಮಾಡುತ್ತಲೇ ಇದೆ.
ದೇಶದ ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಪ್ರಕಟಿಸಿರುವ ಬಹುತೇಕ ಮಾಧ್ಯಮಗಳು ಜಾಹೀರಾತನ್ನು ಪ್ರಕಟಿಸದೆ ಪತ್ರಿಕಾಧರ್ಮ ಪಾಲಿಸಬೇಕಿತ್ತು. ರಾಜ್ಯದ ಪತ್ರಿಕೆಗಳು ಕೂಡ "ಗೋದಿ ಮಾಧ್ಯಮದ" ಭಾಗವಾಗಬಾರದು. ಯಾಕಂದರೆ "ಬಾಪೂ" ಈ ದೇಶ ಕಂಡ ಅತ್ಯಂತ ಆದರ್ಶ ಪತ್ರಕರ್ತರೂ ಆಗಿದ್ದರು ಎಂಬ ಇತಿಹಾಸವನ್ನು ಮರೆಯಬಾರದು ಎಂದು ತಿರುಗೇಟು ನೀಡಿದ್ದಾರೆ.