2026-03-07 05:07:11

No matter which god you worship | ಯಾವುದೇ ದೇವರನ್ನು ಪೂಜಿಸಿದರೂ ನ್ಯಾಯ ನೀತಿಯಿಂದ ಜೀವನ ನಡೆಸಿ ಪ್ರಲ್ಹಾದ ಜೋಶಿ | Speed News kannada

No matter which god you worship | ಯಾವುದೇ ದೇವರನ್ನು ಪೂಜಿಸಿದರೂ ನ್ಯಾಯ ನೀತಿಯಿಂದ ಜೀವನ ನಡೆಸಿ ಪ್ರಲ್ಹಾದ ಜೋಶಿ | Speed News kannada

ಲಿಂಗಸಗೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಬಹುದೊಡ್ಡ ಪರಿವರ್ತನೆ ಕಾಣುತ್ತಿದ್ದು, ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನವಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ರಾಯಚೂರು ಜಿಲ್ಲೆ ಲಿಂಗಸಗೂರಿನ ಗೆಜ್ಜಲಗಟ್ಟಾದ ಶ್ರೀ ವೀರನಾಗಮ್ಮ ದೇವಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಭಾರತ ಸಾಂಸ್ಕೃತಿಕ ನೆಲೆಯುಳ್ಳ ರಾಷ್ಟ್ರವಾಗಿದ್ದು, ಅನೇಕ ವೈಶಿಷ್ಟ್ಯಗಳ ಸಂಗಮದಿಂದ ಕೂಡಿದೆ. ಪ್ರಮುಖವಾಗಿ ಜ್ಞಾನ, ವಿಜ್ಞಾನ, ಧರ್ಮ, ಸಂಪ್ರದಾಯದ ಪರಿಕಲ್ಪನೆ ನಮ್ಮ ದೇಶದಲ್ಲಿ ಅಗಾಧವಾಗಿದೆ. ಹೀಗಾಗಿ ಭಾರತದ ಹಿರಿಮೆಯನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. "ನೀವು ಯಾವುದೇ ದೇವರನ್ನು ಆರಾಧಿಸಿ, ಪೂಜಿಸಿ. ಆದರೆ, ಜೀವನವನ್ನು ನ್ಯಾಯ, ನೀತಿ, ಶಾಂತಿ, ಧರ್ಮದಿಂದ ನಡೆಸಬೇಕು ಎಂದಿದೆ ನಮ್ಮ ಸನಾತನ ಧರ್ಮ ಎಂದ ಸಚಿವರು, ಪೂಜಾ ಪದ್ಧತಿ ಮೀರಿದ ಒಂದು ಧರ್ಮವಿದ್ದು, ಅದೇ "'ಮಾನವ ಧರ್ಮ" ವಾಗಿದೆ ಎಂದು ಪ್ರತಿಪಾದಿಸಿದರು.
ದೇಶ-ಸಮಾಜವನ್ನು ಒಗ್ಗೂಡಿಸಲಿ ಮಠಾಧೀಶರು: ಸಮಾಜದಲ್ಲಿ ಹಿಂದೆ ಸ್ಪ್ರಶ್ಯ - ಅಸ್ಪ್ರಶ್ಯ ಎಂಬುದಿರಲಿಲ್ಲ. ಅದ್ಹೇಗೋ ನಡುವೆ ಹೊಕ್ಕಿದೆ. ಅಸ್ಪ್ರಷ್ಯತೆಯನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ದೇಶ ಮತ್ತು ಸಮಾಜವನ್ನು ಒಗ್ಗೂಡಿಸುವ ಪ್ರಯತ್ನವನ್ನು ಎಲ್ಲಾ ಮಠಾಧೀಶರು ಮಾಡಬೇಕಿದೆ ಎಂದು ಆಶಿಸಿದರು.
ಆಧ್ಯಾತ್ಮಿಕ ಪ್ರವಾಸ: ದೇಶದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಪರಿಚಯ ಮತ್ತು ಶ್ರೀರಾಮನ ಪರಿಚಯಕ್ಕಾಗಿ "ರಾಮಾಯಣ ಸರ್ಕ್ಯೂಟ್" ಎಂಬ ಆಧ್ಯಾತ್ಮಿಕ ಪ್ರವಾಸವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ದೇಶದಲ್ಲಿ ಶ್ರೀರಾಮನ ಕುರುಹುಗಳಿರುವ ಕ್ಷೇತ್ರಗಳು ಸೇರಿದಂತೆ ಒಟ್ಟು 15 ಧಾರ್ಮಿಕ, ಆಧ್ಯಾತ್ಮಿಕ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೋಯ್ದು ಪರಿಚಯಿಸುವ ಕೈಂಕರ್ಯವನ್ನು ಮಾಡಲಾಗುತ್ತಿದೆ. ಅಯೋಧ್ಯೆ, ಹಂಪಿ, ಚಿತ್ರಕೂಟ, ನಾಸಿಕ್, ನಾಗ್ಪುರ ಹೀಗೆ ಪ್ರಮುಖ ಸ್ಥಳಗಳಿಗೆ ಮಕ್ಕಳಿಗೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ರೈಲ್ವೆ ಸಂಚಾರ ಆರಂಭಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
"ವೀರನಾಗಮ್ಮ ದೇವಿಯನ್ನು ಮರೆತಾಗ ಬದುಕು ನಿಂತ ನೀರಂತೆ, ವೀರನಾಗಮ್ಮ ದೇವಿಯನ್ನು ನೆನೆದಾಗ ಬದುಕು ಹರಿವ ನದಿಯಂತೆ, ಮೊರೆವ ಕಡಲಂತೆ" ಎಂದು ಉದ್ಘರಿಸಿದ ಸಚಿವರು, ಈ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ಅವರು ದೇವಿ ನೂತನ ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಸಂತಸ ತಂದಿದೆ ಎಂದರು.
ಚಿತ್ರದುರ್ಗ, ಬಾಗಲಕೋಟೆ ಭೋವಿ ಗುರುಪೀಠದ ಪೀಠಾಧೀಶರಾದ ಇಮ್ಮಡಿ‌ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,ಶಾಸಕರಾದ ಸಿ.ಟಿ.ರವಿ, ಮಾನಪ್ಪ ವಜ್ಜಲ, ಶಿವರಾಜ ಪಾಟೀಲ ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.