ನವದೆಹಲಿ: ದೇಶದಲ್ಲಿರುವ ಧಾರ್ಮಿಕ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳ ಬಳಿ ಇರುವ ಬಂಗಾರವನ್ನು ನಗದೀಕರಣಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಕಳೆದ ಹಲವು ದಿನಗಳಿಂದ ವದಂತಿಗಳು ಹರಿದಾಡುತ್ತಿವೆ. ಅಂತಹ ವದಂತಿಗಳಿಗೆ ಯಾವುದೇ ಆಧಾರ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.
ದೇಗುಲಗಳ ಗೋಪುರ, ಬಾಗಿಲು ಮತ್ತು ದೇವಾಲಯದ ಯಾವುದೇ ಭಾಗದಲ್ಲಿ ಅಳವಡಿಸಿರುವ ಚಿನ್ನದ ತಗಡುಗಳನ್ನು ಭಾರತದ ಕಾರ್ಯತಂತ್ರದ ಚಿನ್ನದ ಮೀಸಲು ಎಂದು ಪರಿಗಣಿಸಲಾಗುತ್ತದೆ ಎಂಬ ವದಂತಿ ಕುರಿತೂ ಸ್ಪಷ್ಟನೆ ನೀಡಿರುವ ಸರ್ಕಾರ, ಅಂತಹ ಸುದ್ದಿಗಳು ಸಂಪೂರ್ಣ ಸುಳ್ಳು, ಆಧಾರರಹಿತವಾಗಿವೆ ಎಂದು ಹೇಳಿದೆ. ಅಂತಹ, ವದಂತಿಗಳಿಗೆ ಕಿವಿಗೊಡಬಾರದು ಮತ್ತು ಅವುಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಯಾವುದೇ ನೀತಿ ನಿರ್ಧಾರಗಳು ಅಥವಾ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ಪತ್ರಿಕಾ ಪ್ರಕಟಣೆಗಳು, ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಪರಿಶೀಲಿಸಿದ ಸಾರ್ವಜನಿಕ ಸಂವಹನ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಆದ್ದರಿಂದ ಅಧಿಕೃತ ಮೂಲಗಳ ಮೂಲಕ ಬರುವ ಮಾಹಿತಿಯನ್ನು ಮಾತ್ರ ನಂಬುವಂತೆ ಮನವಿ ಮಾಡಿದೆ.