ಬೆಂಗಳೂರು: ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವುದು ಈ ಫಲಿತಾಂಶದಿಂದ ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಐದು ರಾಜ್ಯಗಳು ಮತ್ತು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದಲ್ಲಿ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿರುವ ಕೇರಳ ಮತ್ತು ತಮಿಳುನಾಡು ಮತದಾರರನ್ನು ದೇಶದ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸಿದ್ದಾರೆ.
ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಗೆಲುವು ಸರ್ಕಾರದ ಸಾಧನೆಗಳಿಗೆ ಮತ್ತು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಸಿಕ್ಕ ಜಯವಾಗಿದೆ ಎಂದಿದ್ದಾರೆ.
ವಿರೋಧಪಕ್ಷಗಳ ಅಪಪ್ರಚಾರ ಮತ್ತು ಹಣದ ಪ್ರಭಾವದ ಹೊರತಾಗಿಯೂ ಮತದಾರರು ಕಾಂಗ್ರೆಸ್ ಮತ್ತು ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟು ಮತಚಲಾಯಿಸಿದ್ದಾರೆ. ಈ ಎರಡೂ ಕ್ಷೇತ್ರ ಮತ್ತು ಇಡೀ ರಾಜ್ಯದ ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತರಾಗಿ ನಡೆಸಿದ್ದಾರೆ. ಈ ಗೆಲುವಿಗೆ ಕಾರಣರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರನ್ನು ಅಭಿನಂದಿಸಿದ್ದಾರೆ.
ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ದ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಮೋಸದಾಟವೂ ಸೇರಿದಂತೆ ಕೇಂದ್ರ ಚುನಾವಣಾ ಆಯೋಗದ ಕೈವಾಡದಿಂದಾಗಿ ಮಮತಾ ಸೋತಿದ್ದಾರೆ. ಎಸ್ ಐಆರ್ ಅವರ ಪರವಾಗಿದ್ದ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಬಿಜೆಪಿ ಸರ್ಕಾರಿ ಯಂತ್ರದ ದುರ್ಬಳಕೆ, ತೋಳ್ಬಲ ಮತ್ತು ಹಣದ ಬಲವನ್ನು ರಾಜರೋ಼ಷವಾಗಿ ಬಳಸಿ ಈ ಗೆಲುವನ್ನು ಸಾಧಿಸಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಗೆಲುವು ನಿಜವಾದ ಅರ್ಥದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲಾಗಿದೆ. ಧಾರ್ಮಿಕವಾಗಿ ಮತಗಳ ಧ್ರುವೀಕರಣದ ಕುತಂತ್ರ ರಾಜಕಾರಣವನ್ನು ಪಶ್ಚಿಮಬಂಗಾಳದಲ್ಲಿಯೂ ಬಿಜೆಪಿ ಪ್ರಯೋಗಿಸಿ ಯಶಸ್ಸನ್ನು ಕಂಡಿದೆ. ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರಿಗೆ ಶೀಘ್ರದಲ್ಲಿ ತಾವು ಮಾಡಿರುವ ತಪ್ಪಿನ ಅರಿವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡು ಚುನಾವಣೆ ಫಲಿತಾಂಶ ಅನಿರೀಕ್ಷಿತ. ಆಡಳಿತ ವಿರೋಧಿ ಅಲೆ ಇದ್ದರೂ ಡಿಎಂಕೆ ಸರ್ಕಾರದ ಜನಪರ ಆಡಳಿತ ಮತ್ತು ಕಾರ್ಯಕ್ರಮಗಳನ್ನು ಅಲ್ಲಿನ ಜನ ಮೆಚ್ಚಿಕೊಂಡಿದ್ದರು. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಎಂದೂ ಸಹಿಸದ ತಮಿಳು ಮತದಾರರು ಇಂದಿನ ವರೆಗೆ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾ ಬಂದವರು. ಹೀಗಿದ್ದೂ ತಮಿಳುನಾಡಿನ ಯುವಜನರು ಮತ್ತು ಮಹಿಳೆಯರಲ್ಲಿ ಸಿನೆಮಾ ನಟ ವಿಜಯ್ ಅವರ ಬಗೆಗಿನ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.