2026-03-07 05:05:04

No Claim Can Be Made On Stolen Gold | ಕದ್ದ ಚಿನ್ನದ ಮೇಲೆ ಹಕ್ಕು ಸಾಧಿಸುವಂತಿಲ್ಲ ಗಿರವಿ ಅಂಗಡಿಗಳಿಗೆ ಹೈಕೋರ್ಟ್ ಶಾಕ್ | Speed News Kannada

No Claim Can Be Made On Stolen Gold | ಕದ್ದ ಚಿನ್ನದ ಮೇಲೆ ಹಕ್ಕು ಸಾಧಿಸುವಂತಿಲ್ಲ ಗಿರವಿ ಅಂಗಡಿಗಳಿಗೆ ಹೈಕೋರ್ಟ್ ಶಾಕ್ | Speed News Kannada

ಬೆಂಗಳೂರು: ಕಳವು ಮಾಡಲಾದ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರೆ, ಅಂತಹ ಚಿನ್ನದ ಮೇಲೆ ಸಾಲ ನೀಡಿದ ಹಣಕಾಸು ಸಂಸ್ಥೆಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಅಸಲಿ ಮಾಲೀಕರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಕಳ್ಳತನದ ಮಾಲನ್ನು ತನಿಖೆಗಾಗಿ ವಶಪಡಿಸಿಕೊಳ್ಳುವ ಪೊಲೀಸರ ಅಧಿಕಾರ ಪ್ರಶ್ನಿಸಿ ಐಐಎಫ್‌ಎಲ್ ಫೈನಾನ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಕಳ್ಳತನದ ಮಾಲು ಯಾವ ಹಂತದಲ್ಲೂ ಕಾನೂನುಬದ್ಧ ಆಸ್ತಿಯಾಗಲು ಸಾಧ್ಯವಿಲ್ಲ. ಆದ್ದರಿಂದ, ಅಂತಹ ಆಸ್ತಿಯನ್ನು ಅಡವಿಟ್ಟುಕೊಂಡ ಹಣಕಾಸು ಸಂಸ್ಥೆಗಳು ಅದನ್ನು ಪೊಲೀಸರಿಗೆ ನೀಡಲು ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಬೆಂಗಳೂರಿನ ಕೆಂಗೇರಿ ಉಪನಗರದ ಕರೂರು ವೈಶ್ಯ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದ ಅಶ್ವಿನಿ ಗ್ರಾಹಕರು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಒಡವೆಗಳನ್ನು ಕಳವು ಮಾಡಿ, ಅವುಗಳ ಜಾಗದಲ್ಲಿ ನಕಲಿ ಒಡವೆಗಳನ್ನು ಇಟ್ಟಿದ್ದರು. ಕಳವು ಮಾಡಿದ 3 ಕೆ.ಜಿ. ಗೂ ಆಧಿಕ ಚಿನ್ನವನ್ನು ಐಐಎಫ್‌ಎಲ್ ಫೈನಾನ್ಸ್‌ನಲ್ಲಿ ಅಡವಿಟ್ಟು 73 ಲಕ್ಷ ರೂ.ಗೂ ಅಧಿಕ ಸಾಲ ಪಡೆದಿದ್ದರು.ಈ ಅಕ್ರಮ ಬೆಳಕಿಗೆ ಬಂದ ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಪೊಲೀಸರು ಐಐಎಫ್‌ಎಲ್ ಫೈನಾನ್‌ಗೆ ನೋಟಿಸ್ ನೀಡಿ ಚಿನ್ನ ಹಾಜರುಪಡಿಸುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದರೆ ಸಾಲ ವಸೂಲಾತಿಗೆ ತೊಂದರೆಯಾಗುತ್ತದೆ ಎಂಬ ಫೈನಾನ್ಸ್‌ನ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಕದ್ದ ಮಾಲು ಎಂದು ಶಂಕಿಸಲಾದ ಚಿನ್ನವನ್ನು ಪೊಲೀಸರ ಮುಂದೆ ಹಾಜರುಪಡಿಸದೇ ಇದ್ದರೆ ಅದು ತನಿಖೆಗೆ ಸಮಸ್ಯೆ ಉಂಟು ಮಾಡುತ್ತದೆ. ಆದ್ದರಿಂದ ತನ್ನ ಬಳಿ ಇರುವ ವಿವಾದಿತ ಚಿನ್ನವನ್ನು ಪೊಲೀಸರ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದು, ಅವುಗಳು ಕಳ್ಳತನದ ಮಾಲುಗಳು ಎಂದು ಸಾಬೀತಾದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ಆದೇಶಿಸಿದೆ. ಜಪ್ತಿಗೆ ಪೊಲೀಸರಿಗಿದೆ ಅಧಿಕಾರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ನಿಯಮಗಳ ಅಡಿಯಲ್ಲಿ ಕಳ್ಳತನದ ಮಾಲು ಎಂದು ಸಂಶಯವಿರುವ ಯಾವುದೇ ವಸ್ತುವನ್ನು ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರವಿದೆ. ಇದಕ್ಕೆ ಮ್ಯಾಜಿಸ್ಟ್ರೇಟ್ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ತನಿಖೆಯ ಹಂತದಲ್ಲಿ ಪೊಲೀಸರು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.