2026-06-25 02:15:25

ನೀಟ್‌ ವೈಫಲ್ಯದ ಹೊಣೆ ಹೊತ್ತು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಲಿ:ಸಿಎಂ ಸಿದ್ದರಾಮಯ್ಯ|Speed News Kannada

ನೀಟ್‌ ವೈಫಲ್ಯದ ಹೊಣೆ ಹೊತ್ತು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಲಿ:ಸಿಎಂ ಸಿದ್ದರಾಮಯ್ಯ|Speed News Kannada

ಬೆಂಗಳೂರು: ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಕಾರಣರಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಕೂಡಲೇ ರಾಜೀನಾಮೆ ನೀಡಬೇಕು. ನೀಟ್‌ ಪರೀಕ್ಷೆ ರದ್ದುಗೊಳಿಸಿದ ಪರಿಣಾಮ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.

ಅವರು ಇಂದು ಫ್ರೀಡಂ ಪಾರ್ಕ್‌ ನಲ್ಲಿ ನೀಟ್‌ ವೈಫಲ್ಯ ಕುರಿತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಈ ಕೂಡಲೇ ರದ್ದು ಮಾಡಿ 2015 ಕ್ಕೂ ಮೊದಲೇ ಇದ್ದ ವ್ಯವಸ್ಥೆಯನ್ನು ಮರಳಿ ಜಾರಿಗೆ ತರಬೇಕು. ರಾಜ್ಯಗಳಿಗೆ ಮರಳಿ ಅಧಿಕಾರ ನೀಡಬೇಕು. ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡುವ ಮೂಲಕ ಘೋರ ಕ್ರಿಮಿನಲ್ ಅಪರಾಧ ಎಸಗಿರುವ ಎಲ್ಲರನ್ನೂ ಪತ್ತೆ ಹಚ್ಚಿ, ಅವರ ಮೇಲೆ ಕೊಲೆ ಮೊಕದ್ದಮೆಯನ್ನು ಹೊರಿಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಪಡಿಸಿದರು.

ಪ್ರಧಾನಿ ಮೋದಿಯವರು ಕೂಡಲೇ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ದೇಶದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ವ ಪಕ್ಷಗಳೊಂದಿಗೆ ಚರ್ಚಿಸಬೇಕು. ನೀಟ್ ಪರೀಕ್ಷೆಯಲ್ಲಿ ಆದ ಅವಾಂತರಕ್ಕೆ ದೇಶದ ಕ್ಷಮೆಯಾಚಿಸಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದೂ ಒತ್ತಾಯಿಸಿದ್ದಾರೆ.

ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಡೆದ ಪರೀಕ್ಷೆಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆದವು. ಸಬ್ ಇಂಜಿನಿಯರುಗಳ ನೇಮಕಾತಿ, ಇನ್ಸ್‌ಪೆಕ್ಟರುಗಳ ನೇಮಕಾತಿ, ಮುಂತಾದವುಗಳ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರಗಳು ನಡೆದವು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಎಡಿಜಿಪಿ ಕೇಡರಿನ ಮೊಲೀಸ್ ಅಧಿಕಾರಿ ಜೈಲಿಗೆ ಹೋಗಿದ್ದನ್ನು ಸಿಎಂ ನೆನಪಿಸಿಕೊಂಡಿದ್ದಾರೆ.

ಬಿಕ್ಕಟ್ಟು ಉಂಟಾದಾಗ ಪಾಕಿಸ್ತಾನ, ಮುಸ್ಲಿಂ ಎಂದು ಜಪಿಸುವುದು ಬಿಟ್ಟರೆ, ಬೇರೆ ಭಾಷೆಯೂ ಗೊತ್ತಿಲ್ಲ. ಬೇರೆ ಮಾತುಗಳೂ ಗೊತ್ತಿಲ್ಲ. ಭಾರತದ ಆರ್ಥಿಕತೆ ಪಾತಾಳಕ್ಕೆ ಹೋಗುತ್ತಿದೆ. ವಿದೇಶಿ ನೀತಿ ಅಧ್ವಾನವಾಗಿದೆ. ನೆರೆಹೊರೆ ದೇಶಗಳೊಂದಿಗಿನ ಸಂಬಂಧಗಳು ಹಳಸಿ ಹೋಗಿವೆ. ಟ್ರಂಪ್ ಕುಣಿಸಿದಂತೆ ಕುಣಿಯುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ದೇಶದ ಭವಿಷ್ಯದ ಕುರಿತು ಬಿಜೆಪಿ ಎಂದೂ ಗಂಭೀರವಾಗಿಲ್ಲ. ದೇಶದ ಇತ್ತೀಚಿನ ಮಾಹಿತಿಗಳ ಪ್ರಕಾರ ನಿರುದ್ಯೋಗ ಭೀಕರ ಸ್ಥಿತಿ ತಲುಪಿದೆ. 20 ರಿಂದ 29 ವಯಸ್ಸಿನ ಯುವ ಪದವೀಧರರ ನಿರುದ್ಯೋಗದ ಪ್ರಮಾಣ ಶೇ.69 ರಷ್ಟಿದೆ. ಯಾವ ದೇಶದಲ್ಲಿ ದುಡಿಯುವ ಯುವ ಜನರ ಕೈಗೆ ಉದ್ಯೋಗ ಕೊಡಲು ಸಾಧ್ಯವಾಗುವುದಿಲ್ಲವೊ ಆ ದೇಶ ದಾರಿದ್ರಾವಸ್ಥೆಗೆ ಕುಸಿಯುತ್ತದೆ. ಆದ್ದರಿಂದಲೇ ಮೋದಿಯವರು ಚಿನ್ನ, ಬೆಳ್ಳಿ ಖರೀದಿಸಬೇಡಿ, ಪೆಟ್ರೋಲ್, ಡೀಸೆಲ್ ಕಡಿಮೆ ಬಳಸಿ ಎಂದು ದೇಶಕ್ಕೆ ಉಪದೇಶ ಮಾಡಿ ಫಾರಿನ್ ಟೂರ್ ಹೊರಟಿದ್ದಾರೆ. ದೇಶಕ್ಕೆ ಕಷ್ಟ ಬಂದಾಗಲೆಲ್ಲ ಇವರು ಫಾರಿನ್ ಟೂರಿನಲ್ಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು..

ಅಂಬಾನಿ, ಅದಾನಿಗಳನ್ನು ಕೊಬ್ಬಿಸುವುದು ಹಾಗೂ ದೇಶದಲ್ಲಿ ಮನುವಾದವನ್ನು ಜಾರಿಗೆ ತರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಗಳು ಬಿಜೆಪಿಯವರಿಗೆ ಇಲ್ಲ. ಈ ಎರಡೂ ವಿಚಾರಗಳು ದೇಶವನ್ನು ಕತ್ತಲಿನತ್ತ ತಳ್ಳುತ್ತಿವೆ. ಟೇಶವನ್ನು ಕತ್ತಲಿಗೆ ತಳ್ಳಿ ಅಂಬಾನಿ, ಅದಾನಿಗಳು ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಹೂಡಿಕೆ ಮಾಡಲು ಹೊರಟಿದ್ದಾರೆ. ಇಬ್ಬರೂ ಸೇರಿ 327.4 ಬಿಲಿಯನ್ ಡಾಲರುಗಳಷ್ಟು ಹಣ, ಅದು ಭಾರತದ ಕರೆನ್ಸಿಯಲ್ಲಿ 27.3 ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಬೇರೆ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇಲ್ಲಿ ನಮ್ಮ ಯುವ ಜನರಿಗೆ ಉದ್ಯೋಗ ಇಲ್ಲದಂತಾಗಿದೆ. ಮೋದಿಯವರು ಈ ಇಬ್ಬರೂ ಬಂಡವಾಳಿಗರಿಗೆ ಮಾರುಕಟ್ಟೆ ಕುದುರಿಸಿಕೊಡುವ ಕೆಲಸ ಮಾಡಿಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಬೇಜವಾಬ್ದಾರಿ ಶಿಕ್ಷಣ ಸಚಿವ, ಆರೆಸ್ಸೆಸ್ ಮೂಲದ ಧರ್ಮೇಂದ್ರ ಪ್ರಧಾನ್‌ ಮರು ಪರೀಕ್ಷೆ ಘೋಷಣೆ ಮಾಡಿ ಸುಮ್ಮನೆ ಕೂತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ತಂದೆ ತಾಯಂದಿರ ಕ್ಷಮೆ ಕೇಳಿ ಇಷ್ಟೊತ್ತಿಗೆ ರಾಜೀನಾಮೆ ಕೊಡಬೇಕಾಗಿತ್ತು. ಇವರಿಗೆ ಏನೂ ಅನ್ನಿಸುವುದಿಲ್ಲ. ವೈದ್ಯಕೀಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು 5 ಬಾರಿ ಲೀಕ್ ಆಗಿವೆ. ನೀಟ್ ವ್ಯವಸ್ಥೆ ಬಂದ ಮೇಲೆ 2016, 2021, 2024, 2026 ರಲ್ಲಿ ಆಗಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ರಣ್‌ ದೀಪ್‌ ಸಿಂಗ್‌ ಸುರ್ಜೇವಾಲ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌, ಅನೇಕ ಸಚಿವರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.