ರಾಜಸ್ಥಾನ: ಉತ್ತಮ ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ನೀಟ್ ಆಕಾಂಕ್ಷಿಯೊಬ್ಬರು (NEET-UG 2026) ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನೀಟ್ ಯುಜಿ 2026 ಪರೀಕ್ಷೆ ರದ್ದುಗೊಂಡಿದ್ದರಿಂದ ಖಿನ್ನತೆಗೊಳಲಾಗಿದ್ದ ರಾಜ್ಯದ ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ಪ್ರದೀಪ್ ಮೇಘವಾಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ಎಂದು ಪೋಷಕರು ಹೇಳಿದ್ದಾರೆ. ಸಿಕಾರ್ ನಲ್ಲಿ ವಾಸಿಸುತ್ತಿದ್ದ ಈತ ತನ್ನ ಸಹೋದರಿಯ ವೇಲ್ ಬಳಸಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 3ರಂದು ನಡೆಯಬೇಕಿದ್ದ ನೀಟ್-ಯುಜಿ 2026ರ ಪರೀಕ್ಷೆ ರದ್ದುಗೊಂಡಿದ್ದರಿಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರದೀಪ್ ತಂದೆ ರಾಜೇಶ್ ಕುಮಾರ್ ಮೇಘವಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರದೀಪ್ ಮೇ 3 ರಂದು ನಡೆದ ನೀಟ್ ಯುಜಿ 2026ರ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದಾನೆ. ಆದರೆ ಪರೀಕ್ಷೆ ರದ್ದಾಗಿದ್ದರಿಂದ ಖಿನ್ನತೆಗೆ ಜಾರಿದ್ದ ಎಂದು ಹೇಳಿದ್ದಾರೆ.
ಪ್ರದೀಪ್ ಸಾವಿಗೆ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಂತಾಪ ಸೂಚಿಸಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಆಕಾಂಕ್ಷಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಗೋವಾ ಮತ್ತು ಉತ್ತರ ಪ್ರದೇಶದಲ್ಲೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.
ನೀಟ್ ಪರೀಕ್ಷೆ ರದ್ದುಗೊಂಡಿದ್ದರಿಂದ ಉತ್ತರ ಪ್ರದೇಶದ ಲಖಿಂಪುರ ಖೇರಿಯ 21 ವರ್ಷದ ರಿತಿಕ್ ಮಿಶ್ರಾ, ದಕ್ಷಿಣ ಗೋವಾ ಜಿಲ್ಲೆಯ 17 ವರ್ಷದ ವಿದ್ಯಾರ್ಥಿ ಮತ್ತು ದೆಹಲಿಯ ಆಜಾದ್‌ಪುರದಲ್ಲಿ 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.