ನವದೆಹಲಿ: ಬೆಂಗಳೂರಿನ “ನಮ್ಮ ಮೆಟ್ರೋ” ಪ್ರಯಾಣ ದರ ಏರಿಕೆ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ಇಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಮೆಟ್ರೋ ಪ್ರಯಾಣ ದರ ಏರಿಕೆಗೆ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಫೆಬ್ರವರಿ 9 ರಿಂದ ಹೊಸ ದರ ಜಾರಿಗೆ ಬರಲಿದೆ. ಸಾರ್ವಜನಿಕರ ವಿರೋಧವನ್ನು ಲೆಕ್ಕಿಸದೆ ಪ್ರಯಾಣಿಕರ ಮೇಲೆ ಅನಗತ್ಯ ಹೊರೆಯನ್ನು ಹೇರಿದೆ ಎಂದು ಅವರು ಸಚಿವರ ಗಮನಕ್ಕೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಕೋರಲಾಯಿತು ಎಂದು ತೇಜಸ್ವಿ ಸೂರ್ಯ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ದರ ಲೆಕ್ಕಾಚಾರ ಕುರಿತು ತಪ್ಪು ಮಾಹಿತಿಗಳಿವೆ. ಈ ದೋಷಪೂರಿತ ದರ ಪರಿಷ್ಕರಣೆ ಜಾರಿಗೆ ಬರಬಾರದು. ವಾರ್ಷಿಕ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅಗತ್ಯವಿದ್ದರೆ ಹೊಸ ಸಮಿತಿಯ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ನೂತನ ಮತ್ತು ಕೈಗೆಟಕುವ ದರ ನಿಗದಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ ಎಂದೂ ತೇಜಸ್ವಿ ಸೂರ್ಯ ಹೇಳಿದ್ದಾರೆ.