ಸಮಂತಾ ಅವರಿಂದ ದೂರಾದ ಬಳಿಕ ನಾಗ ಚೈತನ್ಯ ಅವರು ಸಾಕಷ್ಟು ಸಮಯ ಏಕಾಂಗಿಯಾಗಿದ್ದರು. ಆ ಸಂದರ್ಭದಲ್ಲಿ ಶೋಭಿತಾ ಅವರ ಪರಿಚಯವಾಯಿತು. ಆರಂಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಶುರುವಾದ ಇವರ ಸ್ನೇಹ, ನಂತರ ಪ್ರೀತಿಗೆ ತಿರುಗಿ ಮದುವೆಯ ಬಂಧಕ್ಕೆ ಸಾಕ್ಷಿಯಾಯಿತು. ಆದರೆ, ಈ ಪ್ರಕ್ರಿಯೆಯಲ್ಲಿ ಶೋಭಿತಾ ಅವರು ಅನುಭವಿಸಿದ ಮಾನಸಿಕ ವೇದನೆ ಮತ್ತು ಜನರ ವಿರೋಧ ನಾಗ ಚೈತನ್ಯ ಅವರಿಗೆ ತೀವ್ರ ಬೇಸರ ತಂದಿದೆ. ನನ್ನ ಪತ್ನಿಯನ್ನು ನೋಡಿದರೆ ನನಗೆ ಸಂಕಟವಾಗುತ್ತದೆ. ಏಕೆಂದರೆ, ಅವಳು ಮಾಡದ ತಪ್ಪಿಗೆ ಇಂದು ದೊಡ್ಡ ಮಟ್ಟದ ಟೀಕೆಗಳನ್ನು ಎದುರಿಸುತ್ತಿದ್ದಾಳೆ ಎಂದು ಚೈತನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು.. ನಾಗ ಚೈತನ್ಯ ಮತ್ತು ಸಮಂತಾ ಅವರ ವೈವಾಹಿಕ ಜೀವನ ಅಂತ್ಯಗೊಳ್ಳಲು ಶೋಭಿತಾ ಧುಲಿಪಾಲ ಅವರೇ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿರುವ ಚೈತನ್ಯ, ನನ್ನ ಹಿಂದಿನ ಸಂಬಂಧ ಮುರಿದು ಬೀಳಲು ಶೋಭಿತಾ ಅವರಿಗೂ ಯಾವುದೇ ಸಂಬಂಧವಿಲ್ಲ. ನಮ್ಮಿಬ್ಬರ ಪರಿಚಯವಾಗಿದ್ದೇ ವಿಚ್ಚೇದನದ ನಂತರ. ಆದರೆ, ಜನರು ಸುಖಾಸುಮ್ಮನೆ ಅವಳನ್ನು ಗುರಿ ಮಾಡಿ ಹೇಟ್ ಕಮೆಂಟ್‌ಗಳನ್ನು ಹಾಕುತ್ತಿರುವುದು ನೋಡಿದರೆ ನೋವಾಗುತ್ತದೆ.. ಎಂದು ಸ್ಪಷ್ಟಪಡಿಸಿದ್ದಾರೆ. ಶೋಭಿತಾ ಅನುಭವಿಸಿದ ಸವಾಲುಗಳ ಬಗ್ಗೆ, ಮಾತನಾಡುತ್ತಾ, ಅನಗತ್ಯ ಆರೋಪಗಳಿಂದ ಅವರು ಸಾಕಷ್ಟು ನೋವು ತಿಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಮಾತುಗಳನ್ನು ಸಹಿಸಿಕೊಂಡಿದ್ದಾರೆ. ಇಷ್ಟೆಲ್ಲಾ ನಕಾರಾತ್ಮಕತೆಯ ನಡುವೆಯೂ ಅವರು ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ತಮಿಳುನಾಡಿನಲ್ಲಿ ಟಿವಿಕೆ-ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದರೆ ಕರ್ನಾಟಕಕ್ಕೆ ಏನು ಲಾಭ?
ನನ್ನ ಪತ್ನಿಯೇ ನಿಜವಾದ ಹೀರೋ : ಯಾವುದೇ ವ್ಯಕ್ತಿ ಇಂತಹ ಕಠಿಣ ಟೀಕೆಗಳನ್ನು ಎದುರಿಸುವಾಗ ಕುಗ್ಗಿ ಹೋಗುವುದು ಸಹಜ. ಆದರೆ ಶೋಭಿತಾ ಅವರು ತೋರಿದ ಪ್ರಬುದ್ಧತೆ ನಾಗ ಚೈತನ್ಯ ಅವರ ಮನ ಗೆದ್ದಿದೆ. ಸಂದರ್ಶನದಲ್ಲಿ ಅವರನ್ನು 'ನಿಜವಾದ ಹೀರೋ' ಎಂದು ಕೊಂಡಾಡಿದ್ದಾರೆ. ಅವರು ಅತ್ಯಂತ ಪ್ರಬುದ್ಧವಾಗಿ ವರ್ತಿಸಿದ್ದಾರೆ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನನ್ನ ಕುಟುಂಬದ ಜೊತೆ ಬೆರೆತು, ಏನೇ ಟೀಕೆಗಳು ಬಂದರೂ ಎದೆಗುಂದದೆ ನಿಂತಿದ್ದಾರೆ. ಅವಳಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು," ಎಂದು ನಾಗ ಚೈತನ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ, ನಾಗ ಚೈತನ್ಯ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇದ್ದ ಅದೆಷ್ಟೋ ಗೊಂದಲಗಳಿಗೆ ಈಗ ತೆರೆ ಎಳೆದಿದ್ದಾರೆ. ಶೋಭಿತಾ ಅವರ ವ್ಯಕ್ತಿತ್ವ ಮತ್ತು ಅವರ ಮೇಲಿನ ಪ್ರೀತಿಯನ್ನು ಸಾರುವ ಮೂಲಕ, ಸುಳ್ಳು ಸುದ್ದಿಗಳನ್ನೇ ನಂಬುವವರಿಗೆ ಸರಿಯಾದ ಉತ್ತರ ನೀಡಿದ್ದಾರೆ. ಸದ್ಯ ಈ ಜೋಡಿ ತಮ್ಮ ಹೊಸ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದು, ಅಭಿಮಾನಿಗಳು ಕೂಡ ಅವರಿಗೆ ಶುಭ ಹಾರೈಸುತ್ತಿದ್ದಾರೆ.