2026-03-07 06:29:31

Mysuru Flyover | ನಂಜನಗೂಡು ಮಾರ್ಗದಲ್ಲಿ ಸಂಚಾರ ಸಮಸ್ಯೆಗೆ ಅಂತ್ಯ ಹೊಸ ಪ್ರೈಓವರ್ ಆರಂಭ | Speed News Kannada

Mysuru Flyover |  ನಂಜನಗೂಡು ಮಾರ್ಗದಲ್ಲಿ ಸಂಚಾರ ಸಮಸ್ಯೆಗೆ ಅಂತ್ಯ ಹೊಸ ಪ್ರೈಓವರ್ ಆರಂಭ | Speed News Kannada

ಮೈಸೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಪ್ರಮುಖ ರಸ್ತೆಗಳ ಮೇಲೆ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗುತ್ತಿದೆ. ವಿಶೇಷವಾಗಿ ಮೈಸೂರು-ನಂಜನಗೂಡು ನಡುವಿನ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಅಪಘಾತಗಳು ಹಾಗೂ ಟ್ರಾಫಿಕ್ ಜಾಮ್ ಸಾಮಾನ್ಯವಾಗಿತ್ತು.
ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಇದೀಗ ಮತ್ತೊಂದು ಪ್ರಮುಖ ಫೈಓವರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಈಗಾಗಲೇ ಜೆಪಿ ನಗರ ಟಿ ಜಂಕ್ಷನ್ ಹಾಗೂ ಎಪಿಎಂಸಿ ಗೇಟ್ ಬಳಿ ಎರಡು ವಾಹನ ಅಂಡರ್ ಪಾಸ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳು ಮೈಸೂರು-ನಂಜನಗೂಡು ರಸ್ತೆಯ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರ ಜೊತೆಗೆ, ಎಪಿಎಂಸಿ ಗೇಟ್-1 ರಿಂದ ರಿಂಗ್ ರಸ್ತೆ ಜಂಕ್ಷನ್ ದಾಟಿ ಎಪಿಎಂಸಿ 2ನೇ ಗೇಟ್ವರೆಗೆ ಹೊಸ ಫೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಫೈಓವರ್‌ಗೆ ಸುಮಾರು 22 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಪೊಲೀಸ್ ಇಲಾಖೆಯ ವರದಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದ ಎಂಟು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. ಈ ಪ್ರದೇಶಗಳು ಸಾರ್ವಜನಿಕರಿಗೆ "ಮೃತ್ಯು ಕೂಪ"ಗಳಂತೆ ಪರಿಣಮಿಸಿದ್ದವು. ಈ ಹಿನ್ನೆಲೆಯಲ್ಲಿ ಅಂಡರ್ ಪಾಸ್ ಹಾಗೂ ಫೈಓವ‌ರ್ ನಿರ್ಮಿಸುವಂತೆ ಶಿಫಾರಸು ಮಾಡಲಾಗಿತ್ತು. ಈ ಪೈಕಿ ನಾಲ್ಕು ಕಡೆಗಳಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಸುಮಾರು ಶೇ.30ರಷ್ಟು ಕೆಲಸ ಪೂರ್ಣಗೊಂಡಿದೆ.
ಹಾಲಿ ನಡೆಯುತ್ತಿರುವ ಕಾಮಗಾರಿ ರಿಂಗ್ ರಸ್ತೆ ಜಂಕ್ಷನ್ ಬಳಿ ಮುಕ್ತಾಯಗೊಳ್ಳುತ್ತಿದ್ದುದರಿಂದ, ಮೈಸೂರು ಕಡೆಯಿಂದ ನಂಜನಗೂಡು ಕಡೆಗೆ ಸಾಗುವ ವಾಹನಗಳು ಮತ್ತೆ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಾಗುತ್ತಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುವುದರ ಜೊತೆಗೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇತ್ತು. ಈ ಸಮಸ್ಯೆಯನ್ನು ಗಮನಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸ್ಥಳ ಪರಿಶೀಲನೆ ನಡೆಸಿ, ಫ್ಲ್ಯಓವ‌ರ್ ಅನ್ನು ಎಪಿಎಂಸಿ 2ನೇ ಗೇಟ್ವರೆಗೂ ವಿಸ್ತರಿಸುವಂತೆ ಸಲಹೆ ನೀಡಿದರು.ಈ ಸಲಹೆಗೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚುವರಿ ಯೋಜನೆಗೆ ಅನುಮೋದನೆ ನೀಡಿದ್ದು, 22 ಕೋಟಿ ರೂ. ಅನುದಾನ ಬಿಡುಗಡೆಗೆ ಒಪ್ಪಿಗೆ ದೊರೆತಿದೆ. ಇದರಿಂದ ಶೀಘ್ರದಲ್ಲೇ ಫೈಓವರ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಯೋಜನೆ ಪೂರ್ಣಗೊಂಡ ನಂತರ ಮೈಸೂರು-ನಂಜನಗೂಡು ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ಸುಗಮವಾಗುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು 2024ರಲ್ಲಿ ನಂಜನಗೂಡು ರೈಲ್ವೆ ಫೈಓವರ್ ಸಂಚಾರಕ್ಕೆ ಮುಕ್ತಗೊಂಡಿತ್ತು. ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡಿಗೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಈ ಪ್ರೈಓವರ್ ಅವರ ಪ್ರಯಾಣವನ್ನು ಬಹಳ ಸುಲಭಗೊಳಿಸಿದೆ. ಪ್ರವಾಸಿಗರು, ಅಂತಾರಾಜ್ಯ ಪ್ರಯಾಣಿಕರು ಹಾಗೂ ಸ್ಥಳೀಯರ ಬಹುಕಾಲದ ಬೇಡಿಕೆಯೂ ಈ ಮೂಲಕ ಈಡೇರಿದೆ.
ನಂಜನಗೂಡು ರೈಲ್ವೆ ಫೈಓವರ್ ನಿರ್ಮಾಣದಿಂದ ಮೈಸೂರು-ಚಾಮರಾಜನಗರ ರೈಲು ಸಂಚಾರದ ವೇಳೆ ಸುಜಾತಪುರಂ ರೈಲ್ವೆ ಗೇಟ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಕಿರಿಕಿರಿ ಸಂಪೂರ್ಣವಾಗಿ ತಪ್ಪಿದಂತಾಗಿದೆ. ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಇದು ದೊಡ್ಡ ಅನುಕೂಲವಾಗಿದೆ. ಸಮಯ ಉಳಿತಾಯ, ಇಂಧನ ಉಳಿವು ಹಾಗೂ ಅಪಘಾತಗಳ ಕಡಿತ ಸೇರಿ ಈ ಯೋಜನೆಗಳು ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿವೆ.
ಒಟ್ಟಿನಲ್ಲಿ, ಮೈಸೂರು-ನಂಜನಗೂಡು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್‌ಗಳು ಮತ್ತು ಹೊಸ ಫೈಓವರ್‌ಗಳು ನಗರ ಸಂಚಾರ ವ್ಯವಸ್ಥೆಗೆ ಶಾಶ್ವತ ಪರಿಹಾರ ನೀಡಲಿವೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.