ಹೊಸದಿಲ್ಲಿ : ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಬೆಂಗಳೂರು- ಕಾರವಾರ ನಡುವೆ ಓಡಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾದ ಶ್ರೀನಿವಾಸ್ ಪೂಜಾರಿ ಅವರು ಕಾರವಾರ ಮತ್ತು ಬೆಂಗಳೂರು ನಡುವೆ ಪ್ರತಿದಿನ 600 ಕ್ಕೂ ಹೆಚ್ಚು ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ನೂರಾರು ಖಾಸಗಿ ವಾಹನಗಳಲ್ಲೂ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ, ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಕಾರವಾರ ನಡುವೆ ಮಂಗಳೂರು ಮತ್ತು ಉಡುಪಿ ಮೂಲಕ ಅರೆ-ಹೈಸ್ಪೀಡ್ ರೈಲು ಸಂಚಾರಕ್ಕೆ ಅನುಮತಿ ನೀಡುವಂತೆ ಕೋರಿದರು.
ಮಂಗಳೂರಿನಿಂದ ಮುಂಬೈವರೆಗಿನ ಕೊಂಕಣ ರೈಲ್ವೆಯ 734 ಕಿ.ಮೀ ಹಳಿಗಳನ್ನು ದ್ವಿಪಥಗೊಳಿಸುವ ಮೂಲಕ ಹೆಚ್ಚುವರಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೂಡಲೇ ಸಮೀಕ್ಷೆ ನಡೆಸಬೇಕು. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ನರೇಂದ್ರ ಮೋದಿಯವರ ಸರಕಾರದ ತುರ್ತು ಕ್ರಮಗಳಿಂದಾಗಿ ಸಾಕಷ್ಟು ಪ್ರಗತಿ ಕಂಡು ಬರುತ್ತಿದೆ. ಇನ್ನೂ ಹೊಸ ರೈಲುಗಳ ಅಗತ್ಯವಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ನೆರವು ನೀಡಬೇಕೆಂದು ರೈಲ್ವೆ ಸಚಿವರಲ್ಲಿ ಮನವಿ ಮಾಡಿಕೊಂಡರು.