ಬೆಂಗಳೂರು: ಸ್ನೇಹಿತೆಯ ಗರ್ಭಿಣಿ ಫೋಟೋ ಶೂಟ್ ಗೆ ತೆರಳಿದ್ದ ಮಹಿಳೆಯೊಬ್ಬರ ಮಗು ಕೃತಕ ಕೊಳದಲ್ಲಿ ಮುಳುಗಿ ಅಸುನೀಗಿರುವ ದುರಂತ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ.
ಮಾಗಡಿ ರಸ್ತೆಯಲ್ಲಿರುವ ಗಿಡ್ಡೇನಹಳ್ಳಿಯ ಶೈರ್ ಸ್ಟುಡಿಯೋದಲ್ಲಿ ಈ ದುರಂತ ಸಂಭವಿಸಿದೆ.
ಮಗುವಿನ ತಾಯಿ ಸ್ವಾತಿ ತನ್ನ ಗರ್ಭಿಣಿ ಸ್ನೇಹಿತೆಯ ಫೋಟೋ ಶೂಟ್ ಗೆ ಸಹಕರಿಸುವಲ್ಲಿ ಮತ್ತು ನೋಡುವಲ್ಲಿ ನಿರತರಾಗಿದ್ದಾರೆ. ಆ ಸಮಯದಲ್ಲಿ ಆಟವಾಡಿಕೊಂಡಿದ್ದ ಮೂರು ವರ್ಷದ ಲಕ್ಷವೀರ್ ಕೊಳಕ್ಕೆ ಇಳಿದಿದ್ದಾನೆ. ಕೊಳ ಕೇವಲ ಎರಡು ಅಡಿ ಇದ್ದರೂ ಎದ್ದು ಬರಲಾಗದೆ ಲಕ್ಷವೀರ್ ಅಸು ನೀಗಿದ್ದಾನೆ.
ಅರ್ಧ ಗಂಟೆ ನಂತರ ಬಾಲಕನ ತಾಯಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ಕೊಳದಲ್ಲಿ ಇರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತಂದೆ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಇತ್ತೀಚೆಗಷಷ್ಟೇ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.