ತಿರುವನಂತಪುರ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಇಂದು ಮುಂಜಾನೆ ಕೇರಳಂ ರಾಜ್ಯದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಾವರ ಆಪ್ತರ ನಿವಾಸಗಳ ಮೇಲೆ ದಾಳಿ ನಡೆಸಿದೆ.
ತಿರುವನಂತಪುರದಲ್ಲಿರುವ ಪಿಣರಾಯಿ ಅವರ ಬಾಡಿಗೆ ಮನೆ ಸೇರಿದಂತೆ ರಾಜ್ಯದ ಒಟ್ಟು 10 ಸ್ಥಳಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಸೆಕ್ಷನ್ ಅಡಿಯಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಾದಿತ ಗಣಿ ಕಂಪನಿ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ಸ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ ಪಿಣರಾಯಿ ಅವರ ಪುತ್ರಿ ವೀಣಾ ಟಿ. ಅವರ ಒಡೆತನದ ಬೆಂಗಳೂರು ಮೂಲದ ಐಟಿ ಸಂಸ್ಥೆ ಎಕ್ಸ್‌ಲಾಜಿಕ್ ಸಲ್ಯೂಷನ್ ನಡುವೆ ನಡೆದಿದೆ ಎನ್ನಲಾದ ರೂ.1.72 ಕೋಟಿ ಪಾವತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆದಿದೆ.
ವೀಣಾ ಅವರ ಸಂಸ್ಥೆಯ ಮೂಲಕ ಆ ಹಣ ಪಿಣರಾಯಿ ಅವರನ್ನು ತಲುಪಿದೆ ಎಂದು ಪತ್ರಕರ್ತರೊಬ್ಬರು ಆರೋಪಿಸಿ ತನಿಖೆ ನಡೆಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಇ.ಡಿ ಕೈಗೊಂಡಿರುವ ಕ್ರಮಗಳನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳಂ ಹೈಕೋರ್ಟ್ ನಿನ್ನೆಯಷ್ಟೇ ವಜಾಗೊಳಿಸಿತ್ತು.