ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ಪಂಚಮಸಾಲಿ ಲಿಂಗಾಯಿತ ಸಮಾಜದ ನೇರ ನುಡಿಯ, ಯುವ ನಾಯಕ ಶಾಸಕರಾದ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘ ಆಗ್ರಹಪಡಿಸಿದೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದಿಂಡೂರ ಲಿಂಗಾಯಿತ ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ 1ಕೋಟಿ ಜನಸಂಖ್ಯೆ ಇದೆ. ನಮ್ಮ ಸಮಾಜ ಕೃಷಿ ಪ್ರಧಾನವಾಗಿದೆ. ಕಿತ್ತೂರು ಚೆನ್ನಮ್ಮ ಆದರ್ಶ ಪಾಲಿಸುತ್ತಾ ಬಂದಿದ್ದೇವೆ. ಲಿಂಗಾಯಿತ ಪಂಚಾಮಸಾಲಿ ಸಮುದಾಯಕ್ಕೆ ಯಾವ ಸರ್ಕಾರವೂ ಆದ್ಯತೆ ನೀಡಿಲ್ಲ ಎಂಬ ಬೇಸರವಿದೆ. ಈಗಲಾದರೂ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಮತ್ತು ಎರಡು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ವಿಜಯಾನಂದ್ ಅವರ ತಂದೆ, ತಾಯಿ ಶಾಸಕರಾಗಿದ್ದರು. ಅವರ ಪತ್ನಿ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಅಭಿವೃದ್ದಿಯ ಜೊತೆಗೆ ನಮ್ಮ ಸಮುದಾಯದ ಅಭಿವೃದ್ಧಿಯಾಗುತ್ತದೆ. ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸಲಾಗಿದೆ. ಉತ್ತಮ ಸ್ಪಂದನೆ ಸಿಕ್ಕಿದೆ. ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಹಳ್ಳಿ, ಪ್ರಧಾನ ಕಾರ್ಯದರ್ಶಿ ಉಮಾಪತಿ, ವೀರಶೈವ ಸಮಾಜದ ಮುಖಂಡರುಗಳಾದ ಶಿವಕುಮಾರ್ ಬೆಳಗಾಂ, ವೀರೇಶ್, ಎಂ.ಸಿದ್ದೇಶ್ ಬೇಗೂರು ಹೆಚ್.ಎನ್.ತಿಪ್ಪೇಸ್ವಾಮಿ, ಧರ್ಮದರ್ಶಿ ಪಿ.ಡಿ.ಶಿರೂರ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು