ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತು ಹಾವು ಏಣಿಯಾಟ ಬಿರುಸುಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರು ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಬೆಂಗಳೂರಿನಿಂದ ಕೌಲಾಲಂಪುರಕ್ಕೆ ತೆರಳಿ ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುವ ಶಾಸಕರು ಹೋಗುವ ಶಾಸಕರು ಮಾರ್ಚ್ 1ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ. ಆರಂಭದಲ್ಲಿ 35 ಶಾಸಕರು ಸಿದ್ದವಾಗಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಕೇವಲ 11 ಶಾಸಕರು ಮಾತ್ರ ವಿದೇಶಕ್ಕೆ ಹಾರಿದ್ದಾರೆ.
ವಿದೇಶ ಪ್ರವಾಸ ಕೈಗೊಂಡ ಶಾಸಕರು:
ದೇವೇಂದ್ರಪ್ಪ (ಜಗಳೂರು); ಹೆಚ್.ಡಿ ತಮ್ಮಯ್ಯ (ಚಿಕ್ಕಮಗಳೂರು); ಹಂಪನಗೌಡ ಬಾದರ್ಲಿ (ಸಿಂಧನೂರು);ಪುಟ್ಟರಂಗಶೆಟ್ಟಿ( ಚಾಮರಾಜನಗರ); ಬಿ.ಎಂ ನಾಗರಾಜ್ ( ಸಿರಗುಪ್ಪ); ಯಶವಂತರಾಯಗೌಡ ಪಾಟೀಲ ( ಇಂಡಿ); ಎ.ಆರ್ ಕೃಷ್ಣಮೂರ್ತಿ ( ಕೊಳ್ಳೇಗಾಲ); ಬಸನಗೌಡ ದದ್ದಲ್ ( ರಾಯಚೂರು ಗ್ರಾಮೀಣ)
ವಿಧಾನಪರಿಷತ್ ಸದಸ್ಯರು: ಶರಣಗೌಡ ಬಯ್ಯಾಪುರ, ವಸಂತ್ ಕುಮಾರ್, ನಾಗರಾಜ್ ಯಾದವ್ ಮತ್ತು ಡಾ. ಡಿ. ತಿಮಯ್ಯ
ಮತ್ತೊಂದು ಕಡೆ ಸಚಿವ ಎಸ್.ಎಸ್. ಎಸ್ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ಪತ್ನಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತಿತರ ಸಂಬಂಧಿಗಳ ಜತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ಶಾಸಕರೆಲ್ಲರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಿಗೆ ಮಾಹಿತಿ ನೀಡಿಯೇ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇದೊಂದು ಖಾಸಗಿ ಪ್ರವಾಸವಾದರೂ ರಾಜಕೀಯ ಉದ್ದೇಶಿತ ಪ್ರವಾಸ ಎಂದೇ ಹೇಳಲಾಗುತ್ತಿದೆ. ಆರಂಭದಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲೇ ಪ್ರವಾಸ ಹೊರಟಿದ್ದರು. ನಂತರ ಬದಲಾಗಿದೆ.
ಶಾಸಕರ ವಿದೇಶ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ಪ್ರವಾಸಕ್ಕೆ ಪ್ರಾಯೋಜಕರು ಇದ್ದಾರೆ ಎಂಬ ಅರ್ಥದಲ್ಲಿ ಮಾತನಾಡಿದ್ದರು.