ಬೆಂಗಳೂರು: ಹಳ್ಳಿಗಳಲ್ಲಿ ವಾಸವಿದ್ದು, ವ್ಯವಸಾಯ ಮಾಡಿಕೊಂಡಿರುವ ಗಂಡು ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಅವರಿಗೆ ವಿಶೇಷ ಸ್ಥಾನಮಾನವನ್ನು ಘೋಷಿಸಬೇಕು ಎಂದು ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ನನ್ನ ಮತಕ್ಷೇತ್ರ ಕುಣಿಗಲ್ ತಾಲ್ಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಬನೆ ಹೆಚ್ಚಿರುತ್ತದೆ ಹಾಗೂ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು, ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ ಇವರನ್ನು ಮದುವೆ ಆಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, ಮೂವತ್ತು ವರ್ಷ ದಾಟಿದರೂ ಮದುವೆ ಆಗದೆ, ತೊಂದರೆಯಲ್ಲಿರುತ್ತಾರೆ. ಆದ್ದರಿಂದ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಬಜೆಟ್ ತಯಾರಿ ಸಂದರ್ಭದಲ್ಲಿ ರೈತಸಂಘಟನೆಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದರು. ಆಗಲೂ ರೈತ ಮುಖಂಡರು ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 10 ಲಕ್ಷ ರೂ. ಠೇವಣಿ ಇಡಬೇಕು ಎಂದು ಆಗ್ರಹಪಡಿಸಿದ್ದರು.