ಮಹಾರಾಷ್ಟ್ರ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮುಂಬ್ರಾದಲ್ಲಿ ಪ್ರೇಯಸಿಯೇ ತನ್ನ ಪತಿ ಮತ್ತು ಸಹೋದರನೊಂದಿಗೆ ಸೇರಿ ಪ್ರೇಮಿಯನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ಡ್ರಮ್‌ಗೆ ತುಂಬಿ ಚರಂಡಿಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ದೇಶಾದ್ಯಂತ ಸೃಷ್ಟಿಸಿದ್ದ ಮೀರತ್‌ನ 'ಬ್ಲೂ ಡ್ರಮ್' ಕೊಲೆ ಪ್ರಕರಣವನ್ನು ನೆನಪಿಸುವಂತಿದೆ. ಕೊಲೆಯಾದ ದುರ್ದೈವಿಯನ್ನು ಮುಂಬ್ರಾ ನಿವಾಸಿ, 26 ವರ್ಷದ ಸಿವಿಲ್ ಇಂಜಿನಿಯರ್ ಅರ್ಬಾಜ್ ಮನ್ಸೂದ್ ಅಲಿ ಖಾನ್ ಎಂದು ಗುರುತಿಸಲಾಗಿದೆ. ಏಪ್ರಿಲ್ 3 ರಂದು ಅರ್ಬಾಜ್ ಅವರು ದಾದರ್ ಕೆಲಸದ ನಿಮಿತ್ತ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದರು, ಆದರೆ ವಾಪಸ್ ಬಂದಿರಲಿಲ್ಲ. ಈ ಸಂಬಂಧ ಅವರ ತಂದೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ಅರ್ಬಾಜ್ ಅವರ ಕಾಲ್ ರೆಕಾರ್ಡ್ಸ್ ಮತ್ತು ಮೊಬೈಲ್ ಲೋಕೇಶನ್ ಪರಿಶೀಲಿಸಿದಾಗ, ಅವರ ಕೊನೆಯ ಲೋಕೇಶನ್ ವಸಾಯಿ ಪ್ರದೇಶದಲ್ಲಿ ತೋರಿಸಿತ್ತು. ಇದೇ ವೇಳೆ ಅವರ ಪ್ರೇಯಸಿ ಮೆಹಜಬೀನ್ ಶೇಖ್ ಮೊಬೈಲ್ ಕೂಡ ಅದೇ ಲೋಕೇಶನ್‌ನಲ್ಲಿರುವುದು ಪತ್ತೆಯಾಯಿತು.
ವಿಚಾರಣೆ ವೇಳೆ ತಪೊಪ್ಪಿಗೆ:ಪೊಲೀಸರು ಮೆಹಜಬೀನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆರಂಭದಲ್ಲಿ ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದರೂ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೆಹಜಬೀನ್ ತನ್ನ ಪತಿ ಹಸನ್, ಸಹೋದರ ತಾರಿಕ್ ಶೇಖ್ ಮತ್ತು ಪತಿಯ ಸ್ನೇಹಿತ ಮುಜಮ್ಮಿಲ್ ಜೊತೆ ಸೇರಿ ಅರ್ಬಾಜ್‌ನಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದರು. ಹಣದ ವಿಚಾರ ಚರ್ಚಿಸಲು ಆತನನ್ನು ವಸಾಯಿಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಅರ್ಬಾಜ್ ಹಣ ನೀಡಲು ನಿರಾಕರಿಸಿದಾಗ, ಆರೋಪಿಗಳು ಆತನ ಕೈಕಾಲುಗಳನ್ನು ಕಟ್ಟಿ ಹಾಕಿ ಪ್ಲಾಸ್ಟಿಕ್ (PVC) ಪೈಪ್ ಗಳಿಂದ ತೀವ್ರವಾಗಿ ಥಳಿಸಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅರ್ಬಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆರೋಪಿಗಳು ಅರ್ಬಾಜ್ ಶವವನ್ನು ಹಸಿರು ಬಣ್ಣದ ಪ್ಲಾಸ್ಟಿಕ್ ಡ್ರಮ್‌ಗೆ ತುಂಬಿ, ವಸಾಯಿ ಪ್ರದೇಶದ ಜನರಿಲ್ಲದ ಚರಂಡಿಗೆ ಎಸೆದಿದ್ದರು. ಮುಂಬ್ರಾ ಪೊಲೀಸರುಮುಖ್ಯ ಆರೋಪಿ ಮೆಹಜಬೀನ್ ಶೇಖ್ ಮತ್ತು ಆಕೆಯ ಸಹೋದರ ತಾರಿಕ್ ಶೇಖ್‌ನನ್ನು ಬಂಧಿಸಿದ್ದಾರೆ. ತಾರಿಕ್ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೆಹಜಬೀನ್ ಪತಿ ಹಸನ್ ಮತ್ತು ಆತನ ಸ್ನೇಹಿತ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಾಗಿದೆ.