ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿಟ್ಟು ನಾಪತ್ತೆಯಾಗಿರುವ (Crime) ಘಟನೆ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ರಾಮಮಂಟಪ ಸಮೀಪದ ತುಂಗಾ ನದಿಯ ತೀರದಲ್ಲಿ ವ್ಯಕ್ತಿಯ ಬಟ್ಟೆ, ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಆತ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿಯನ್ನು ಇಲಿಯಾಸ್ ಎಂದು ಗುರುತಿಸಲಾಗಿದ್ದು, ನಾಪತ್ತೆಯಾಗಿರುವ ವ್ಯಕ್ತಿ ಎಲೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಇಲಿಯಾಸ್ ನಿನ್ನೆಯಿಂದ ಕಾಣೆಯಾಗಿದ್ದು, ಇದೀಗ ನದಿ ತೀರದಲ್ಲಿ ಸಿಕ್ಕಿರುವ ವಸ್ತುಗಳ ಆಧಾರದಲ್ಲಿ ತುಂಗಾ ನದಿಗೆ ಹಾರಿರಬಹುದೆಂದು ಶಂಕಿಸಲಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಈಜುಗಾರರು ಧಾವಿಸಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ವ್ಯಾಪಕ ಹುಡುಕಾಟ ಮುಂದುವರಿದಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಕಾಲುವೆಯಲ್ಲಿ ಮುಳುಗಿ ತಂದೆ-ಮಗ ದಾರುಣ ಸಾ*ವು
ಬೀದರ್: ಕಾರಂಜಾ ಅಣೆಕಟ್ಟಿನ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟ ಘಟನೆ ಬೀದರ್ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮ ಸಮೀಪ ನಡೆದಿದೆ. ಹಳ್ಳಿಖೇಡ್ (ಬಿ) ಗ್ರಾಮದ ವಿಶ್ವನಾಥ (50) ಹಾಗೂ ಅಮರೇಶ (23) ಮೃತರು.
ಸಿಮೆಂಟ್ ಲೋಡ್ ಇಳಿಸಿ ಊರಿನತ್ತ ಮರಳುತ್ತಿದ್ದ ವೇಳೆ, ದಾರಿಯಲ್ಲಿದ್ದ ಕಾಲುವೆ ಬಳಿ ವಾಹನ ನಿಲ್ಲಿಸಿ ಅಮರೇಶ ಕೈಕಾಲು ತೊಳೆಯಲು ನೀರಿಗೆ ಇಳಿದಿದ್ದಾನೆ. ಈ ವೇಳೆ ಆತನ ಕಾಲು ಜಾರಿ ನೀರಲ್ಲಿ ಮುಳುಗಿದ್ದಾನೆ. ಮಗನನ್ನು ಉಳಿಸಲು ವಿಶ್ವನಾಥ ಕೂಡ ತಕ್ಷಣ ಕಾಲುವೆಗೆ ಹಾರಿದ್ದಾರೆ. ಆದರೆ ನೀರಿನ ಹರಿವು ಜೋರಾಗಿದ್ದರಿಂದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಧನ್ನೂರು ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರತೆಗೆದಿದ್ದಾರೆ.