ಕೊಪ್ಪಳ: ಆರ್‌ಎಸ್‌ಎಸ್ ಒಂದು ದೆವ್ವ. ಬಿಜೆಪಿ ಅದರ ನೆರಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸರಿಯಾಗಿಯೇ ಹೇಳಿಕೆ ನೀಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಯಾರ ಯಾರ ಮೇಲೋ ಇಡಿ, ಐಟಿ, ಸಿಬಿಐ ದಾಳಿ ಮಾಡುವ ಬದಲು ಆರ್‌ಎಸ್‌ಎಸ್ ಕಚೇರಿ ಮೇಲೆ ಮೊದಲು ದಾಳಿ ನಡೆಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಯಾವತ್ತಾದರೂ ಒಂದು ದಿನ ದೇಶಕ್ಕೆ ಆರ್‌ಎಸ್‌ಎಸ್ ಲೆಕ್ಕ ಕೊಡಲೇಬೇಕು. ನೂರು ವರ್ಷಗಳನ್ನು ಪೂರೈಸಿರುವ ಸಂಸ್ಥೆಗೆ ಬೃಹತ್ ಮೊತ್ತ ಎಲ್ಲಿಂದ ಬರುತ್ತದೆ. ಯಾರೆಲ್ಲ ಕೊಡುತ್ತಾರೆ ಎನ್ನುವ ಸತ್ಯ ಬಹಿರಂಗವಾಗಬೇಕು. ಸಣ್ಣ ಸಣ್ಣ ಸಂಸ್ಥೆಗಳೂ ನೋಂದಣಿ ಮಾಡಿಕೊಳ್ಳುತ್ತವೆ. ಆರ್‌ಎಸ್‌ಎಸ್ ದೊಡ್ಡ ಸಂಸ್ಥೆಯಾದರೂ ಏಕೆ ನೋಂದಣಿಯಾಗಿಲ್ಲ, ಆರ್‌ಎಸ್‌ಎಸ್ ಕಚೇರಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿ ಹಣದ ಮೂಲ ಪತ್ತೆ ಹಚ್ಚಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯವೂ ಸೇರಿದಂತೆ ದೇಶದಲ್ಲಿ ಕೋಮುವಾದ ಹೆಚ್ಚುತ್ತಿದೆ. ದೊಡ್ಡ ಪ್ರಮಾಣದ ಹೂಡಿಕೆಯಾಗಿ ಉದ್ಯೋಗ ಸೃಷ್ಟಿಯಾಗಬೇಕಾದರೆ ಪೂರಕ ವಾತಾವರಣ ಇರಬೇಕು. ಹೂಡಿಕೆದಾರರು ಸಾಧಕ ಭಾದಕಗಳನ್ನು ನೋಡಿಯೇ ಹೂಡಿಕೆ ಮಾಡುತ್ತಾರೆ. ಇದೇ ಕಾರಣಕ್ಕೆ ಕರಾವಳಿ ಭಾಗಕ್ಕೆ ಐಟಿ, ಬಿಟಿ ಬರುತ್ತಿಲ್ಲ. ಬಿಜೆಪಿಗರಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.